ಕನ್ನಡ ಸಾಹಿತ್ಯ ಸಮ್ಮೇಳನ: ಗೋಕಾಕ್ ಚಳವಳಿಯಲ್ಲಿ ಹೋರಾಡಿದ ಕನ್ನಡ ಹೋರಾಟಗಾರರಿಗೆ ಇಲ್ಲ ಪ್ರಾಮುಖ್ಯತೆ

ಹೊಸದಿಗಂತ ವರದಿ ಹಾವೇರಿ:

ಕನ್ನಡ ನಾಡು ನುಡಿ ಉಳಿವಿಗಾಗಿ ಹಾಗೂ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಜಾರಿಗೆ ಆಗಬೇಕೆಂದು ಆರಂಭವಾದ ಗೋಕಾಕು ಚಳುವಳಿಯಲ್ಲಿ  ಪಾಲ್ಗೊಂಡು ಅವಿರತವಾಗಿ ಹೋರಾಡಿದ್ದಷ್ಟೇ ಅಲ್ಲದೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು ಶಿಕ್ಷೆ ಅನುಭವಿಸಿದ ಹಾವೇರಿ ನಗರದ ಹೋರಾಟಗಾರರನ್ನು ಹಾವೇರಿಯಲ್ಲಿ ಜರಗುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ಸಂದರ್ಭದಲ್ಲಿ ಮರೆತಿರುವುದು ಯಾವ ನ್ಯಾಯ?

ಹೌದು, 1940ರ ದಶಕದಲ್ಲಿ ಪ್ರಾರಂಭವಾದ ಗೋಕಾಕ್ ಚಳುವಳಿಯಲ್ಲಿ ಹಾವೇರಿ ನಗರ ನೂರಾರು ಜನರು ಭಾಗವಹಿಸಿದ್ದರು ಅವರಲ್ಲಿ 63 ಜನರು ಈ ಚಳಿವಳಿಯ ಸಂದರ್ಭದಲ್ಲಿ ಬಂಧಿತರಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿ ಬಂದಿದ್ದಾರೆ.
ಕನ್ನಡ ನಾಡು ನುಡಿಗಾಗಿ ಹೋರಾಡಿದ ಈ 63 ಜನರಲ್ಲಿ ಸಾರ್ವಜನಿಕರು ಹೇಳುವಂತೆ ಅಬ್ಬಾಬ್ಬಾ ಎಂದರೂ ಈಗ 15-20ಜನ ಜೀವಿಸಿರಬಹುದು. ಆದರೆ ಅವರ ಕುಟುಂಬ ವರ್ಗದವರು ಇಂದಿಗೂ ಜೀವಂತವಾಗಿದ್ದಾರೆ ಎನ್ನುವುದು ಮಾತ್ರ ಸುಳ್ಳಲ್ಲ.

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ನಗರದಲ್ಲಿನೇ ಜರಗುತ್ತಿದೆ. ಇಂತಹ ಸಂದರ್ಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದ ಹಾವೇರಿ ಜಿಲ್ಲೆಯವರನ್ನು ಗಣನೆಗೆ ತಗೆದುಕೊಳ್ಳಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಅದು ದೊಡ್ಡ ಪಟ್ಟಿಯಾಗುತ್ತದೆ ಎಂದು ಅಂದುಕೊಂಡರೂ ಕನಿಷ್ಟ ಪಕ್ಷ ಹಾವೇರಿ ನಗರದ ಮಹನೀಯರನ್ನು ಗಣನೆಗೆ ತಗೆದುಕೊಂಡು ಅವರಿಗೊಂದು ಗೌರವ ಸಲ್ಲಿಸುವ ಕಾರ್ಯಕ್ಕೆ ಜಿಲ್ಲಾಡಳಿತವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ಮುಂದಾಗದೇ ಇರುವುದು ನಗರದ ಜನತೆಯಲ್ಲಿ ಬೇಸರವನ್ನು ತರಿಸಿದೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿ 80ರ ದಶಕದಲ್ಲಿ ಆರಂಭವಾಗಿದ್ದ ವಿ.ಕೃ.ಗೋಕಾಕ್ ಚಳುವಳಿಗೆ ರಾಜ್ಯದ ಮೂಲ ಮೂಲೆಯಿಂದ ಜನತೆ ಆಗಮಿಸಿದಂತೆ ಹಾವೇರಿ ಜಿಲ್ಲೆಯಿಂದಲೂ ಅನೇಕರು ಪಾಲ್ಗೊಂಡಿದ್ದರು. ಇಂತಹವರಲ್ಲಿ ಹಾವೇರಿ ನಗರದ 63 ಜನರು ಎನ್ನುವುದು ಹೆಮ್ಮೆಯ ಸಂಗತಿ.

ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಜಾರಿಗೆ ಆಗಬೇಕೆಂದು ಹೋರಾಡದ ಇಂತಹ ಮಹನೀಯರನ್ನು ಗಣನೆಗೆ ತಗೆದುಕೊಳ್ಳದೇ ಇದ್ದುದು ವಿಪರ್ಯಾಸದ ಸಂಗತಿ. ಕನ್ನಡ ನಾಡು ನುಡಿಗಾಗಿ ಹೋರಾಡಿದವರನ್ನು ಕಡೆಗಣಿಸಿದ್ದು ದೊಡ್ಡ ತಪ್ಪು. ಇಂತಹ ಮಹನೀಯರಿಗೆ ಗೌರವ ಸಲ್ಲಿಸುವ ಮೂಲಕ ಆದ ತಪ್ಪನ್ನು ಸರಿಪಡಿಸುವ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮುಂದಾಗುವುದೇ ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!