ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ನಗರದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ಮಂಗಳವಾರ ಹಲ್ಮಿಡಿ ಶಾಸನಕ್ಕೆ ಕ್ಷೀರಾಭಿಷೇಕ ಹಾಗೂ ಪವಿತ್ರ ಜಲಾಭಿಷೇಕ ನೆರವೇರಿಸಿ, ಕನ್ನಡದ ಅಸ್ತಿತ್ವ ಮತ್ತು ಗೌರವವನ್ನು ಪ್ರತಿಪಾದಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು.
ಕನ್ನಡಪರ ಹೋರಾಟಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ನೂರಾರು ಕನ್ನಡಾಭಿಮಾನಿಗಳು ಭಾಗವಹಿಸಿ “ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ”ಎಂಬ ಘೋಷಣೆಗಳೊಂದಿಗೆ ಕನ್ನಡಪರ ವಾತಾವರಣ ನಿರ್ಮಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, “ಹಲ್ಮಿಡಿ ಶಾಸನ ಕನ್ನಡದ ಇತಿಹಾಸದ ಹೆಮ್ಮೆಯ ಸಂಕೇತ. ಕನ್ನಡ ಭಾಷೆ, ನೆಲ ಮತ್ತು ಸಂಸ್ಕೃತಿಯ ಮೇಲೆ ಯಾರೇ ದಾಳಿ ಮಾಡಲು ಮುಂದಾದರೂ ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಕನ್ನಡಿಗರ ಆಸ್ತಿ :
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡಪರ ನಾಯಕರು, “ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ. ಇದು ಕನ್ನಡಿಗರ ಆಸ್ತಿ. ಈ ನೆಲದ ಇತಿಹಾಸ, ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ” ಎಂದು ಹೇಳಿದರು.
ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಕನ್ನಡಪರ ಕಾರ್ಯಕರ್ತರು ಹಲ್ಮಿಡಿ ಶಾಸನದ ಪ್ರತಿರೂಪಕ್ಕೆ ಹಾಲು ಹಾಗೂ ಪವಿತ್ರ ಜಲಾಭಿಷೇಕ ನೆರವೇರಿಸಿ, ಕನ್ನಡ ಧ್ವಜಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು. “ಕನ್ನಡ ಉಳಿಯಬೇಕು”, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ”, “ಕನ್ನಡ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ” ಎಂಬ ಘೋಷಣೆಗಳು ಮೊಳಗಿದವು.
ಪಾಲಿಕೆಯಲ್ಲಿ ಕನ್ನಡಪರ ನಿರ್ಣಯಕ್ಕೆ ಒತ್ತಾಯ :
ಈ ವೇಳೆ ಮಾತನಾಡಿದ ಹೋರಾಟಗಾರರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕನ್ನಡ ನಾಮಫಲಕ, ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಬಳಕೆ ಹಾಗೂ ಕನ್ನಡಿಗರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:
ಬೆಳಗಾವಿಯಲ್ಲಿ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸುವ ಯಾವುದೇ ಶಕ್ತಿಯನ್ನು ಕನ್ನಡಿಗರು ಸಹಿಸುವುದಿಲ್ಲ. ಕನ್ನಡ ವಿರೋಧ ಮಾಡುವವರಿಗೆ ಪಾಠ ಕಲಿಸುವುದು ನಮಗೆ ಗೊತ್ತಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಪೊಲೀಸ್ ಬಿಗಿ ಭದ್ರತೆ:
ಕಾರ್ಯಕ್ರಮದ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಪ್ರಮುಖ ವೃತ್ತಗಳು ಹಾಗೂ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು.
ಕನ್ನಡಾಭಿಮಾನಿಗಳಲ್ಲಿ ಉತ್ಸಾಹ
ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಹಾಗೂ ಹಿರಿಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಕನ್ನಡ ಧ್ವಜಗಳನ್ನು ಹಿಡಿದು ಘೋಷಣೆ ಕೂಗಿದ ಕಾರ್ಯಕರ್ತರು ಕನ್ನಡಪರ ಹೋರಾಟಕ್ಕೆ ಇನ್ನಷ್ಟು ಬಲ ತುಂಬುವ ಸಂಕಲ್ಪ ವ್ಯಕ್ತಪಡಿಸಿದರು.
ಕನ್ನಡದ ಇತಿಹಾಸವನ್ನು ಸಾರುವ ಹಲ್ಮಿಡಿ ಶಾಸನಕ್ಕೆ ಅಭಿಷೇಕ ನೆರವೇರಿಸುವ ಮೂಲಕ ಬೆಳಗಾವಿಯಲ್ಲಿ ಮತ್ತೊಮ್ಮೆ ಕನ್ನಡಾಭಿಮಾನ ಉಕ್ಕಿ ಹರಿದ ದೃಶ್ಯ ಕಂಡುಬಂದಿತು.



