ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲೆ, ಸಿನಿಮಾ, ಕ್ರೀಡೆ ಹಾಗೂ ಸಮಾಜ ಸೇವೆಯ ಮೂಲಕ ದೇಶದ ಉನ್ನತಿಗೆ ಶ್ರಮಿಸಿದ ಮಹಾನ್ ಚೇತನಗಳಿಗೆ ನಿನ್ನೆ ರಾಷ್ಟ್ರಪತಿ ಭವನದಲ್ಲಿ ಪದ್ಮ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ, ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ಮತ್ತು ಕರ್ನಾಟಕದ ಹೆಸರಾಂತ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಸೇರಿದಂತೆ ದೇಶದ 131 ಹೆಮ್ಮೆಯ ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಸಿಂಗ್ ಡಿಯೋಲ್ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್‌ಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಪಿಟೀಲು ವಾದಕಿ ಎಂ. ಎಸ್. ರಾಜಮ್ ಕೂಡ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾದರು.
ಪದ್ಮಭೂಷಣ ಪ್ರಶಸ್ತಿ
ಹಿರಿಯ ಗಾಯಕಿ ಅಲ್ಕಾ ಯಾಗ್ನಿಕ್, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ, ಕ್ರೀಡಾಪಟು ವಿಜಯ್ ಅಮೃತರಾಜ್ ಮತ್ತು ಕರ್ನಾಟಕದ ಹೆಸರಾಂತ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪದ್ಮಶ್ರೀ ಪ್ರಶಸ್ತಿ
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಒಟ್ಟು 113 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕದ ಸಾಧಕರಿಗೆ ಒಲಿದ ಗೌರವ
ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿಯಲ್ಲಿ ಕರ್ನಾಟಕದ ಎಂಟು ಸಾಧಕರು ಸ್ಥಾನ ಪಡೆದಿದ್ದಾರೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶತಾವಧಾನಿ ಆರ್. ಗಣೇಶ್‌ಗೆ ಪದ್ಮಭೂಷಣ, ಸಮಾಜ ಸೇವೆ ಮತ್ತು ಪುಸ್ತಕ ಸಂಗ್ರಹಕ್ಕಾಗಿ ಅಂಕೇಗೌಡ, ಸಮಾಜ ಸೇವೆ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸುಶೀಲಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ಡಾ. ಪ್ರಭಾಕರ್ ಬಸವಪ್ರಭು ಕೋರೆಗೆ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಶುಭಾ ವೆಂಕಟೇಶ್ ಅಯ್ಯಂಗಾರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸುರೇಶ ಹನಗವಾಡಿ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಟಿ ಟಿ ಜಗನ್ನಾಥನ್ ಹಾಗೂ ಶಶಿ ಶೇಖರ್ ವೆಂಪತಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.



