ರಾಷ್ಟ್ರೋತ್ಥಾನ ʼಕನ್ನಡ ಪುಸ್ತಕ ಹಬ್ಬʼಕ್ಕೆ ನ.1ರಂದು ಚಾಲನೆ: ಒಂದು ತಿಂಗಳ ಕಾಲ ಪುಸ್ತಕ ಮಾರಾಟ, ಪ್ರದರ್ಶನ

‌ ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ʼಕನ್ನಡ ಪುಸ್ತಕ ಹಬ್ಬʼಕ್ಕೆ ನವೆಂಬರ್‌ 1ರಂದು ಚಾಲನೆ ಸಿಗಲಿದೆ. ಈ ಬಾರಿ ನವೆಂಬರ್ 1 ರಿಂದ ಡಿಸೆಂಬರ್ 3ರ ವರೆಗೆ ಅಂದರೆ 33 ದಿನಗಳ ಕಾಲ ನಡೆಯಲಿರುವ ಈ ಹಬ್ಬದಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 8ರ ವರೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳೂ ಕೂಡ ನಡೆಯಲಿವೆ.

‘ಕನ್ನಡ ಪುಸ್ತಕ ಹಬ್ಬ’

2021ರಿಂದ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸುತ್ತಿದ್ದು, ಈ ವರ್ಷ ಮೂರನೆಯ ಕನ್ನಡ ಪುಸ್ತಕ ಹಬ್ಬವು ನವೆಂಬರ್ 1ರಿಂದ ಡಿಸೆಂಬರ್ 3ರ ವರೆಗೆ ಒಟ್ಟು 33 ದಿನಗಳ ಕಾಲ ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ನಡೆಯಲಿದೆ.

ನವೆಂಬರ್ 1ರಂದು ಬೆಳಗ್ಗೆ 11 ಗಂಟೆಗೆ ಜನಪ್ರಿಯ ನಟ-ನಿರ್ದೇಶಕರೂ ‘ಸಂಸ್ಕಾರಭಾರತಿ’ಯ ಪ್ರಾಂತ ಅಧ್ಯಕ್ಷರೂ ಆದ ಸುಚೇಂದ್ರಪ್ರಸಾದ್ ಅವರು ‘ಕನ್ನಡ ಪುಸ್ತಕ ಹಬ್ಬ’ವನ್ನು ಉದ್ಘಾಟಿಸಲಿದ್ದು, ‘ವಿಜಯಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಶ್ರೀ ಸುದರ್ಶನ ಚನ್ನಂಗಿಹಳ್ಳಿ ಹಾಗೂ ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ-ಸಂಯೋಜಕರಾದ ಶ್ರೀ ರಘುನಂದನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಪುಸ್ತಕ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ. ಪ್ರತೀ ವಾರಾಂತ್ಯದ ದಿನಗಳಲ್ಲಿ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು, ವಾರದ ದಿನಗಳಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ. ಮಕ್ಕಳಿಗಾಗಿ, ಮಹಿಳೆಯರಿಗಾಗಿ ಕೆಲವು ಸ್ಪರ್ಧೆಗಳೂ ನಡೆಯಲಿದ್ದು, ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮಗಳೂ ನಡೆಯಲಿವೆ.

ಈ ಕಾರ್ಯಕ್ರಮಗಳಲ್ಲಿ ಡಾ|| ಗುರುರಾಜ ಕರಜಗಿ, ರವಿ ಹೆಗಡೆ (ಸಂಪಾದಕರು, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್), ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ (ಅಧ್ಯಕ್ಷರು, ಬೆಂಗಳೂರು ರಾಮಕೃಷ್ಣ ಆಶ್ರಮ), ದಿವಾಕರ ಹೆಗಡೆ, ಡಾ|| ಬಿ. ವಿ. ವಸಂತಕುಮಾರ್, ಡಾ|| ಅಜಕ್ಕಳ ಗಿರೀಶ್ ಭಟ್, ಅಡ್ಡಂಡ ಕಾರ್ಯಪ್ಪ, ಡಾ|| ಟಿ. ಆರ್. ಅನಂತರಾಮು, ಶತಾವಧಾನಿ ಡಾ|| ಆರ್. ಗಣೇಶ್, ಪ್ರೊ|| ಷಣ್ಮುಖ, ಡಾ|| ವಿ. ಬಿ. ಆರತಿ, ಅಜಿತ್ ಹನಮಕ್ಕನವರ್ ಮೊದಲಾದವರು ಉಪನ್ಯಾಸ, ಸಂವಾದಗಳನ್ನು ನಡೆಸಿಕೊಡಲಿದ್ದಾರೆ.

ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆಗಳಷ್ಟೇ ಅಲ್ಲದೆ, ಕನ್ನಡದ ಪ್ರಮುಖ ಲೇಖಕರ ಕೃತಿಗಳೂ ರಿಯಾಯಿತಿ ದರದಲ್ಲಿ ದೊರೆಯಲಿವೆ. ಕನ್ನಡದ ಬಹುತೇಕ ಎಲ್ಲ ಪ್ರಕಾಶಕರ ಪ್ರಕಟಣೆಗಳೂ ಲಭ್ಯವಿರಲಿದ್ದು ಕನಿಷ್ಟ 10% – 50%ರ ವರೆಗೂ ರಿಯಾಯಿತಿ ಸಿಗಲಿದೆ. ಪುಸ್ತಕ ಹಬ್ಬಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಕೂಪನ್ ಭರ್ತಿಮಾಡಿ, ಪ್ರತಿದಿನದ ‘ಲಕ್ಕಿ ಡ್ರಾ’ದಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರತಿದಿನವೂ ಡ್ರಾ ಮಾಡಿ ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುತ್ತದೆ. ಈ ಪುಸ್ತಕ ಹಬ್ಬಕ್ಕೆ ರಾಷ್ಟ್ರೋತ್ಥಾನವು ಸರ್ವರಿಗೂ ಸ್ವಾಗತ ಕೋರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!