ಕನ್ನಡ ಸಾಹಿತ್ಯ ಸಮ್ಮೇಳನ: ಒಂದು ಸಾವಿರ ವಾಹನ ಬಳಕೆ: ಡಾ. ಬಸವರಾಜ ಕೆಲಗಾರ

ಹೊಸದಿಗಂತ ವರದಿ, ಹಾವೇರಿ

ಜನವರಿ ೬ ರಿಂದ ೮ರವರೆಗೆ ಮೂರು ದಿನಗಳ ಕಾಲ ಹಾವೇರಿಯಲ್ಲಿ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ವ್ಯವಸ್ಥಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಮ್ಮೇಳನದ ಸಾರಿಗೆ ಉಪ ಸಮಿತಿ ನಿರ್ಧರಿಸಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಮ್ಮೇಳನ ಸಾರಿಗೆ ಸಮಿತಿಯ ಉಪಾಧ್ಯಕ್ಷ ಬಸವರಾಜ ಕೆಲಗಾರ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಿಗೆ ಸಮಿತಿ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಸಮ್ಮೇಳನದಲ್ಲಿ ಭಾಗವಹಿಸಲು ಬರುವ ಗಣ್ಯರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ವಸತಿ ನಿಲಯಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಉಚಿತವಾಗಿ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಗಣ್ಯರು, ಅತಿಗಣ್ಯರು, ಮಾಧ್ಯಮದವರು ಹಾಗೂ ನೋಂದಾಯಿತ ಪ್ರತಿನಿಧಿಗಳಿಗೆ ವಸತಿ ಸ್ಥಳದಿಂದ ಸಮ್ಮೇಳನದ ಸ್ಥಳನಕ್ಕೆ ವ್ಯವಸ್ಥಿತವಾದ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂದಾಜು ೨೬ ಸಾವಿರ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮೂರು ದಿನಗಳ ಕಾಲ ನಡೆಯುವ ಸಮ್ಮೇಳದಲ್ಲಿ ಆರು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಹೆಚ್ಚುವರಿ ಬಸ್ ಸೌಕರ್ಯ ಸೇರಿದಂತೆ ಸಾರಿಗೆ ಸಮಸ್ಯೆಯಾಗದಂತೆ ಪಾವತಿ ಆಧಾರದ ಮೇಲೆ ಬಸ್ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನದ ಸ್ಥಳದಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಶಾಲಾ ಬಸ್‌ಗಳು ಹಾಗೂ ಸರ್ಕಾರಿ ವಾಹನಗಳನ್ನು ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ರಾಜ್ಯದ ಅಕ್ಕಪಕ್ಕದ ಜಿಲ್ಲೆ ಹಾಗೂ ಬೆಳಗಾವಿ ಅಧಿವೇಶನಕ್ಕೆ ಆಗಮಿಸುವ ವಾಹನಗಳನ್ನು ಸಮ್ಮೇಳನಕ್ಕೆ ಉಳಿಸಿಕೊಳ್ಳುವ ಕುರಿತಂತೆ ಈಗಾಗಲೇ ಪತ್ರವ್ಯವಹಾರ ನಡೆಸಲಾಗಿದೆ. ಬಾಡಿಗೆ ಆಧಾರದ ಮೇಲೆ ಖಾಸಗಿ ವಾಹನಗಳನ್ನು ಪಡೆಯುವ ಸಂದರ್ಭ ಬಂದರೆ ಸ್ಥಳೀಯ ವಾಹನಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಸಾರಿಗೆ ಸಮಿತಿ ಸದಸ್ಯಕಾರ್ಯದರ್ಶಿ ವಸೀಂಬಾಬಾ ಮುದ್ದೇಬಿಹಾಳ ಮಾಹಿತಿ, ಗಣ್ಯಾತಿಗಣ್ಯರು, ಗಣ್ಯರು, ಪರಿಷತ್ ಸದಸ್ಯರು, ಕಲಾವಿದರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿ ೨೬,೫೦೦ ಜನರನ್ನು ಕರೆತರಲು ಒಂದು ಸಾವಿರ ವಾಹನಗಳು ಅಗತ್ಯವಿದ್ದು, ೪೦೦ ಇನೋವಾ ವಾಹನ, ೧೨ ಲಗ್ಜುರಿ ಎಸಿ ಬಸ್‌ಗಳು, ೨೬೮ ಕೆ.ಎಸ್.ಆರ್.ಟಿಸಿ. ಬಸ್, ೧೫ ಮಿನಿ ಬಸ್‌ಗಳು, ೭೫ ಶಾಲಾ ವಾಹನ, ೪೦೦ ಖಾಸಗಿ ಕಾರಗಳು, ೮೦ ಡಿವಿ ವಾಹನಗಳು, ೧೫೦ ಬುಲೆರೋ, ಸ್ಕಾರ್ಫಿಯೋ ಸೇರಿದಂತೆ ಸರ್ಕಾರಿ ವಾಹನಗಳನ್ನು ಪಡೆಯಲು ನಿರ್ಧರಿಸಲಾಗಿದೆ. ವಾಹನ ಪಾರ್ಕಿಂಗ್ ಸ್ಥಳದಲ್ಲಿ ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನ, ಪ್ರಥ, ಚಿಕಿತ್ಸೆ ವ್ಯವಸ್ಥೆ, ಕ್ರೇನ್‌ಗಳ ವ್ಯವಸ್ಥೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ವ್ಯವಸ್ಥೆಗೆ ಚರ್ಚಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಬೇವಿನಮರದ ಒಳಗೊಂಡಂತೆ ಸಮಿತಿಯ ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರು, ವಿವಿಧ ಸಾರಿಗೆ ವಾಹನಗಳ ಮಾಲೀಕರು, ಚಾಲಕರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!