‘ಕಾಂತಾರ’ಕ್ಕೆ ತುಂಬಿತು ವರ್ಷ: ಚಿತ್ರತಂಡ ಹರ್ಷ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಾಂತಾರ’ ಸಿನಿಮಾ ಬಿಡುಗಡೆಗೊಂಡು ಒಂದು ವರ್ಷ ಪೂರೈಸಿದೆ . ಕಳೆದ ವರ್ಷ ಇದೇ ದಿನ ಸಿನಿಮಾ ತೆರೆಗಪ್ಪಳಿಸಿತ್ತು. ಅದಾದ ಬಳಿಕ ಆದದ್ದೆಲ್ಲವೂ ಇತಿಹಾಸವೇ.

ಇದೀಗ ವರ್ಷ ಪೂರೈಸಿರುವ ಸಂಭ್ರಮದಲ್ಲಿರುವ ಚಿತ್ರತಂಡ, ಅದ್ಭುತ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ. ಅದರ ಸಲುವಾಗಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದೆ.

‘ಕಾಂತಾರ’ ಹೇಗೆ ಶುರುವಾಯಿತು ಅನ್ನೋದರಿಂದ ಹಿಡಿದು ಇಡೀ ಚಿತ್ರದ ಈವರೆಗಿನ ಸಕ್ಸಸ್​ ಅನ್ನು ವಿಡಿಯೋ ಮೂಲಕ ತೋರಿಸಲಾಗಿದೆ.

‘ಬೆಳಕು.. ಬೆಳಕಲ್ಲಿ ಕಣ್ಣ ಮುಂದೆ ಇರುವುದೆಲ್ಲವೂ ಕಾಣಿಸುತ್ತದೆ. ಆದರೆ ಈ ಬೆಳಕೆಲ್ಲಾ ದರ್ಶನ’ ಎಂಬ ಮಾತಿನೊಂದಿಗೆ ವಿಡಿಯೋ ಪ್ರಾರಂಭಗೊಳ್ಳುತ್ತದೆ. ಅಲ್ಲಿಂದ ದೈವಾರಾಧನೆ, ಭೂತಕೋಲ ಹಾಗೂ ಸಿನಿಮಾದ ಕೆಲವು ಪ್ರಮುಖ ದೃಶ್ಯಗಳನ್ನು ತೋರಿಸಲಾಗಿದೆ. ಈ ಸಿನಿಮಾ ಹೇಗೆ ಸಿದ್ಧಗೊಂಡಿತು, ಅದಕ್ಕೆ ಪಟ್ಟ ಪರಿಶ್ರಮವನ್ನು ಕೂಡ ಪ್ರೇಕ್ಷಕರಿಗೆ ತೋರಿಸಲಾಗಿದೆ.

ಜೊತೆಗೆ ಈ ವಿಡಿಯೋದಲ್ಲಿ ರಿಷಬ್​ ಶೆಟ್ಟಿ, ಪ್ರಗತಿ ರಿಷಬ್​ ಶೆಟ್ಟಿ ಸೇರಿದಂತೆ ಚಿತ್ರತಂಡ ತಮ್ಮ ಅನುಭವ ಹಾಗೂ ಕಥೆ ರೂಪುಗೊಂಡ ರೀತಿಯನ್ನು ಹಂಚಿಕೊಂಡಿದ್ದಾರೆ. ಇದಾಗಿ ಸಿನಿಮಾ ರಿಲೀಸ್​ ಆದಾಗ ಸಿಕ್ಕಿದ ಪ್ರೇಕ್ಷಕರ ರೆಸ್ಪಾನ್ಸ್​, ಸೆಲೆಬ್ರಿಟಿಗಳ ಪ್ರತಿಕ್ರಿಯೆ, ರಾಜಮೌಳಿ ಹೊಗಳಿಕೆ, ಕಮಲ್​ ಹಾಸನ್​ ಪ್ರಶಂಸೆ, ಜೊತೆಗೆ ಈವರೆಗೆ ಕಾಂತಾರ ಸಿನಿಮಾ ಪಡೆದುಕೊಂಡ ಪ್ರಶಸ್ತಿ, ಪುರಸ್ಕಾರ, ಹೆಗ್ಗಳಿಕೆ ಎಲ್ಲವನ್ನೂ ಕೇವಲ 8 ನಿಮಿಷಗಳ ವಿಡಿಯೋದಲ್ಲಿ ತೋರಿಸಲಾಗಿದೆ.

ಸೆಪ್ಟೆಂಬರ್ 30, 2022 ರಂದು ತೆರೆಕಂಡ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಅದ್ಭುತ ಕಥೆ ಇದ್ದರೆ ಸಿನಿಮಾಗೆ ಗೆಲುವು ಖಚಿತ ಅನ್ನೋದನ್ನು ಕಾಂತಾರ ತಂಡ ಸಾಬೀತು ಪಡಿಸಿತು.

ಯಾವುದೇ ಪ್ಯಾನ್​ ಇಂಡಿಯಾ ಚಿತ್ರ ಅಂದ್ರೂ ಅದು ಬಹುಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗುತ್ತವೆ. ಆದ್ರೆ ಕಾಂತಾರ ಮೊದಲು ಕನ್ನಡದಲ್ಲಿ ತೆರೆಕಂಡು ನಂತರ ಪ್ರೇಕ್ಷಕರ ಬೇಡಿಕೆ ಮೇರೆಗೆ ಬಹುಭಾಷೆಗಳಿಗೆ ಡಬ್​ ಆಗಿ ತೆರೆಕಂಡಿತು. ಸರಿಸುಮಾರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆದ ಈ ಸಿನಿಮಾ ಗಳಿಸಿದ್ದು 400 ಕೋಟಿ ರೂ.ಗೂ ಹೆಚ್ಚು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!