Tuesday, June 6, 2023

Latest Posts

ಕರ್ನಾಟಕದ 30 ಎಫ್‌ಪಿಓಗಳಿಗೆ ₹ 1.21 ಕೋಟಿಗೂ ಅಧಿಕ ಅನುದಾನ- ಇದರಿಂದ ರೈತರಿಗಾಗೋ ಲಾಭ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಪ್ರಧಾನಿ ಮೋದಿ ಅವರಿಂದು ಬಿಡುಗಡೆ ಮಾಡಿರುವ ಸುಮಾರು 351 ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ) ಗಳಿಗೆ ₹ 14 ಕೋಟಿ ಇಕ್ವಿಟಿ ಅನುದಾನದಲ್ಲಿ, ಕರ್ನಾಟಕದ ಒಟ್ಟು 30 ಎಫ್‌ಪಿಓಗಳ ಒಟ್ಟು 12,047 ಸದಸ್ಯರಿಗೆ ₹ 1,21,42,000 ಅನುದಾನ ಬಿಡುಗಡೆಯಾಗಿದೆ.

ಈ ಅನುದಾನದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಎಫ್‌ಪಿಓಗಳಿಗೆ ₹ 57.74ಲಕ್ಷ, ನಬಾರ್ಡ್‌ನ 11 ಎಫ್‌ಪಿಓಗಳಿಗೆ ₹ 43.69 ಲಕ್ಷ, ಎಸ್‌ಎಫ್‌ಎಸಿಯ 6 ಎಫ್‌ಪಿಓಗಳಿಗೆ ₹ 19.19 ಲಕ್ಷ ಅನುದಾನ ಇಕ್ವಿಟಿ ಗ್ರ್ಯಾಂಟಾಗಿದೆ.

ರೈತ ಉತ್ಪಾದಕರ ಸಂಸ್ಥೆ ಎಂದರೇನು?
ರೈತರು ಉತ್ಪಾದಕರಾಗಿ ಅವರ ಕೃಷಿ ಉತ್ಪನ್ನಗಳಿಗೆ ಸೂಕ್ತವಾದ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮಲ್ಲಿರುವ ರೈತರೆಲ್ಲ ಸಣ್ಣ ಹಿಡುವಳಿದಾರರು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ತನ್ನ ಉತ್ಪನ್ನವನ್ನು ಲಾಭಕ್ಕೆ ಮಾರುವುದು ಹಾಗೂ ತನ್ನ ಜಮೀನಿನಲ್ಲಿ ಯಂತ್ರೋಪಕರಣ- ಆಧುನಿಕ ತಂತ್ರಜ್ಞಾನ ಅಳವಡಿಸಿ ಕೃಷಿ ಮಾಡುವುದು ಇವೆರಡೂ ಅವರಿಗೆ ಕಷ್ಟ. ಇಂಥ ಸಣ್ಣ ರೈತರನ್ನು ಒಂದು ಒಕ್ಕೂಟ ಮಾಡಿ, ಸಾಂಸ್ಥಿಕ ರೂಪ ಕೊಟ್ಟರೆ ಅವರ ಚೌಕಾಶಿ ಸಾಮರ್ಥ್ಯ ಎಲ್ಲ ರೀತಿಯಿಂದ ಹೆಚ್ಚಾಗುತ್ತದಲ್ಲವೇ? ಅಲ್ಲದೇ, ಈ ಸಂಘದ ಮೂಲಕ ಎಲ್ಲರಿಗೂ ಉಪಯೋಗವಾಗುವ ಉಪಕರಣ-ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಬಹುದು. ಇದಕ್ಕಾಗಿ ಕೇಂದ್ರ ಸರಕಾರ ಕೃಷಿ ಸಹಕಾರ ಹಾಗೂ ರೈತರ ಕಲ್ಯಾಣ ಸಚಿವಾಲಯದ ಮೂಲಕ, ರೈತ ಉತ್ಪಾದಕರ ಸಂಸ್ಥೆಯನ್ನು ಸ್ಥಾಪಿಸಲು ಅನುದಾನ ನೀಡುತ್ತಿದೆ. ಇದರ ಮೂಲಕ ರೈತರನ್ನು ಸಂಘಟಿಸಿ, ಅವರ ಸಾಮರ್ಥ್ಯ ಬಲವರ್ಧನೆ, ಹೆಚ್ಚಿನ ಉತ್ಪಾದಕತೆ ಮತ್ತು ವಾಣಿಜ್ಯ ವ್ಯವಹಾರದಲ್ಲಿ ಪ್ರಗತಿ ಕಾಣಲಿದೆ.

ರೈತ ಉತ್ಪಾದಕರ ಸಂಸ್ಥೆಗಳಿಗೆ ಈಕ್ವಿಟಿ ಅನುದಾನ ಬಿಡುಗಡೆ ಕಾರ್ಯಕ್ರಮ ಭಾರತ ಸರಕಾರದ 2020-21ನೇ ಸಾಲಿನ ಆಯವ್ಯಯದಲ್ಲಿ ಫಾರ್ಮೇಶನ್ ಆ್ಯಂಡ್ ಪ್ರಮೋಷನ್ ಆಫ್ 10,000 ಫಾರ್ಮರ್ ಪ್ರೊಡ್ಯೂಸರ್ ಆರ್ಗನೈಸೇಶನ್ಸ್ ಎಂದು ಘೋಷಿಸಲಾಗಿದೆ. ರಾಜ್ಯಕ್ಕೆ ವಿವಿಧ ಅನುಷ್ಠಾನ ಸಂಸ್ಥೆಗಳಿಂದ 185 ರೈತ ಉತ್ಪಾದಕರ ಸಂಸ್ಥೆ ( ಜಲಾನಯನ ಅಭಿವೃದ್ಧಿ ಇಲಾಖೆ -100, ಎಸ್ಎಫ್ಎಸಿ – 25, ನಬಾರ್ಡ್ – 37 ಮತ್ತು ಎನ್ಸಿಡಿಸಿ – 23 )ಗಳನ್ನು ರಚಿಸಲು ವಿವಿಧ ಅನುಷ್ಠಾನ ಸಂಸ್ಥೆಗಳಿಗೆ ಗುರಿಯನ್ನು ನೀಡಲಾಗಿದೆ. ಅಲ್ಲದೇ ಯೋಜನೆಯಡಿ ಇಲ್ಲಿಯವರೆಗೂ ಒಟ್ಟಾರೆ 152 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲಾಗಿದೆ. ರೈತ ಉತ್ಪಾದಕರ ಸಂಸ್ಥೆಗಳಿಗೆ ಸಂಗ್ರಹಿಸಲಾದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ₹ 15 ಲಕ್ಷಗಳವರೆಗೆ ಮ್ಯಾಚಿಂಗ್ ಅನುದಾನವಾಗಿ ಇಕ್ವಿಟಿ ಗ್ರ್ಯಾಂಟ್ ನೀಡಲಾಗುತ್ತಿದೆ. ಈ ₹ 15‌ಲಕ್ಷ ಇಕ್ವಿಟಿ ಗ್ರ್ಯಾಂಟ್‌ಗಳನ್ನು ಗರಿಷ್ಠ ಮೂರು ಹಂತಗಳಲ್ಲಿ ನೀಡಲಾಗುವುದು. ಇದರಿಂದ ರೈತ ಉತ್ಪಾದಕರ ಸಂಸ್ಥೆಗಳ ಬಂಡವಾಳ ನಿಧಿ ಹೆಚ್ಚಾಗಿ ಇದು ವ್ಯವಹಾರ ಅಭಿವೃದ್ಧಿಗೆ ನೆರವಾಗುತ್ತದೆ.

ಇನ್ನು ರೈತ ಉತ್ಪಾದಕರ ಸಂಸ್ಥೆಗಳು ಪಡೆದ ಇಕ್ವಿಟಿ ಗ್ರ್ಯಾಂಟ್ ಅನುದಾನದಲ್ಲಿ ಸದಸ್ಯರಿಂದ ಸಂಗ್ರಹಿಸಿದ ಷೇರು ಮೊತ್ತಕ್ಕೆ ಅನುಗುಣವಾಗಿ ಗರಿಷ್ಠ ₹ 2000ವರೆಗೆ ಸೀಮಿತಗೊಳಿಸಿ ಷೇರುಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 30 ರೈತ ಉತ್ಪಾದಕರ ಸಂಸ್ಥೆಗಳ 12,047 ಸದಸ್ಯರಿಗೆ ₹1. 21 ಕೋಟಿ ಅನುದಾನವನ್ನು ಪ್ರಧಾನ ಮಂತ್ರಿಗಳು ಇಂದು ಬಿಡುಗಡೆ ಮಾಡಿದ್ದಾರೆ.

ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಉತ್ಪಾದಕರ ಸಂಸ್ಥೆಗಳ ಅಡಿಯಲ್ಲಿ ತರುವ ಕೇಂದ್ರ ಸರಕಾರದ ಪ್ರಯತ್ನವು ಒಂದು ಉದಯೋನ್ಮುಖ ಮಾರ್ಗವಾಗಿದೆ. ಇದು ಕೃಷಿ ಕ್ಷೇತ್ರವು ಎದುರಿಸುತ್ತಿರುವ ಹಲವಾರು ಸವಾಲುಗಳಿಗೆ ಅದರಲ್ಲಿಯೂ ಮುಖ್ಯವಾಗಿ ಬಂಡವಾಳ ಹೂಡಿಕೆಗೆ ಸೂಕ್ತ ಅವಕಾಶಗಳು, ತಂತ್ರಜ್ಞಾನಗಳು, ಗುಣಮಟ್ಟದ ಪರಿಕರಗಳ ಲಭ್ಯತೆ ಹಾಗೂ ಮಾರುಕಟ್ಟೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಮಾರುಕಟ್ಟೆ ಮಾಡುವುದರಿಂದ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಲಾಭವೂ ರೈತರಿಗೇ ಸಿಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!