ದೇಗುಲ ಸ್ವಾಯತ್ತೆ, ಹಿಂದು ಶ್ರದ್ಧೆಗಳಿಗೆ ಬಜೆಟ್ಟಿನ ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ, ಅಭಿವೃದ್ಧಿ ಕಾಮಗಾರಿಗಳ ವಿವೇಚನೆಯನ್ನು ದೇವಾಲಯಗಳಿಗೆ ಪ್ರತ್ಯಾಯೋಜಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿದೆ. ಭಕ್ತಾದಿಗಳು ಈ ಬೇಡಿಕೆಯನ್ನು ಪರಿಗಣಿಸಿ, ಈ ಸಾಲಿನ ಬಜೆಟ್‌ನಲ್ಲಿ ಸಿಎಂ ಈ ಘೋಷಣೆ ಮಾಡಿದ್ದಾರೆ.

  • ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರಿಗೆ ನೆರವಾಗಲು ಪ್ರಸ್ತುತ ತಸ್ತೀಕ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲಾಗುವುದು.
  • ದೇವಾಲಯಗಳ ವಿವಿಧ ಸೇವೆಗಳನ್ನು ಭಕ್ತಾದಿಗಳಿಗೆ ಆನ್‌ಲೈನ್ ಮುಖಾಂತರ ಲಭ್ಯಪಡಿಸಲು Integrated Temple Management System ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ.
  • ಆಂಧ್ರ ಪ್ರದೇಶದಲ್ಲಿರುವ ಪ್ರಸಿದ್ಧ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸ ಸಂಕೀರ್ಣವನ್ನು 85 ಕೋಟಿ ರೂ. ಮೊತ್ತದಲ್ಲಿ ಎರಡು ಹಂತಗಳಲ್ಲಿ ನಿರ್ಮಿಸಲು ಯೋಜಿಸಿದ್ದು, ಮೊದಲನೇ ಹಂತದ ಕಾಮಗಾರಿಯನ್ನು 45 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲಾಗುವುದು.
  • ಮಹಾರಾಷ್ಟ್ರದ ಪಂಡರಾಪುರಕ್ಕೆ ರಾಜ್ಯದಿಂದ ಭೇಟಿ ನೀಡುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಅತಿಥಿ ಗೃಹವನ್ನು ಅಭಿವೃದ್ಧಿಪಡಿಸಲಾಗುವುದು.
  • ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಕೆ.ಎಸ್.ಟಿ.ಡಿ.ಸಿ. ವತಿಯಿಂದ ರಿಯಾಯಿತಿ ದರದಲ್ಲಿ ಪ್ಯಾಕೇಜುಗಳನ್ನು ರೂಪಿಸಲಾಗುವುದು.
  • ರಾಜ್ಯದಿಂದ ಕಾಶಿ ಯಾತ್ರೆಯನ್ನು ಕೈಗೊಳ್ಳುವ 30,000 ಯಾತ್ರಾರ್ಥಿಗಳಿಗೆ ಸರಕಾರದಿಂದ ತಲಾ 5,000 ರೂ.ಗಳ ಸಹಾಯಧನ ನೀಡಲಾಗುವುದು.
  • ಶ್ರೀ ಮಡಿವಾಳ ಮಾಚಿದೇವ ಮೂಲಸ್ಥಾನ ದೇವರಹಿಪ್ಪರಗಿಯಲ್ಲಿ ಮಾಚಿದೇವರ ಎಲ್ಲ ಕುರುಹುಗಳನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕ ಯಾತ್ರಾ ಸ್ಥಳಗಳನ್ನಾಗಿ ಮಾಡಲಾಗುವುದು.
  • ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಅಪಾರ ಕೊಡುಗೆ ನೀಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮಠಗಳು ಹಾಗೂ ಸಂಸ್ಥೆಗಳ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ವಿಶೇಷ ನೆರವು ಸರಕಾರದಿಂದ ನೀಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!