June 26, 2026
Friday, June 26, 2026
spot_img

ನಾಳೆ ರಾಜ್ಯದಲ್ಲಿ ಮೆಡಿಸಿನ್‌ ಸಿಗೋದು ಅನುಮಾನ, ಕಾರ್ಪೋರೇಟ್‌ ರಿಯಾಯಿತಿ ವಿರುದ್ಧ ಕೆಮಿಸ್ಟ್‌ಗಳ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆನ್‌ಲೈನ್ ಮೂಲಕ ಔಷಧಗಳ ಮಾರಾಟ ಮತ್ತು ಕಾರ್ಪೊರೇಟ್ ಕಂಪನಿಗಳು ನೀಡುತ್ತಿರುವ ಭಾರಿ ರಿಯಾಯಿತಿ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೆಡಿಕಲ್‌ ಸ್ಟೋರ್‌ಗಳು ಬಾಗಿಲು ತೆಗೆಯೋದು ಡೌಟ್‌. ಪ್ರತಿಭಟನೆಯ ಭಾಗವಾಗಿ ಮೇ 20 ರಂದು ಶಿವಮೊಗ್ಗ ಜಿಲ್ಲಾದ್ಯಂತ 800ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ ಎಂದು ಶಿವಮೊಗ್ಗ ಜಿಲ್ಲಾ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಸಂಘ ಸೋಮವಾರ ತಿಳಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಧುಕರ್ ಎಸ್.ಪಿ., ಅಖಿಲ ಭಾರತ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಸಂಸ್ಥೆಯು (AIOCD) ಈ ಪ್ರತಿಭಟನೆಗೆ ಕರೆ ನೀಡಿದ್ದು, ಜಿಲ್ಲಾ ಸಂಘವು ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್‌ಗಳನ್ನು ಹೊರತುಪಡಿಸಿ, ಜಿಲ್ಲೆಯ ಉಳಿದೆಲ್ಲಾ ಚಿಲ್ಲರೆ ಔಷಧ ಅಂಗಡಿಗಳು ಆ ದಿನ ಮುಚ್ಚಲಿವೆ ಎಂದು ತಿಳಿಸಿದ್ದಾರೆ.

ನಕಲಿ ಚೀಟಿ ಬಳಸಿ ಔಷಧ ಮಾರಾಟ

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡಲು ಅನುಮತಿ ನೀಡಿದ್ದ ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಎಂದು ಸಂಘವು ಒತ್ತಾಯಿಸಿದೆ. “ಆ ನಿಯಮವನ್ನು ಈಗ ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ವೈದ್ಯರ ಚೀಟಿ ಇಲ್ಲದೆಯೇ ನಕಲಿ ಔಷಧಗಳು ಮತ್ತು ನಿಷೇಧಿತ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ವಿಶೇಷವಾಗಿ ಯುವ ಪೀಳಿಗೆಯನ್ನು ರಕ್ಷಿಸಲು ಆನ್‌ಲೈನ್ ಔಷಧ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮಧುಕರ್ ಆಗ್ರಹಿಸಿದ್ದಾರೆ.

ದೊಡ್ಡ ಕಂಪನಿಗಳ ಜತೆ ಕಾಂಪಿಟೇಷನ್‌ ಅಸಾಧ್ಯ

ಸಂಘದ ಮಾಜಿ ಜಂಟಿ ಕಾರ್ಯದರ್ಶಿ ಚಂದ್ರಶೇಖರ್ ಎಸ್. ಮಾತನಾಡಿ, ದೊಡ್ಡ ಕಾರ್ಪೊರೇಟ್ ಕಂಪನಿಗಳು ನೀಡುವ ಭಾರಿ ರಿಯಾಯಿತಿಗಳಿಂದಾಗಿ ಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಸಂಕಷ್ಟವನ್ನು ಎತ್ತಿ ತೋರಿಸಿದರು. “ಚಿಲ್ಲರೆ ಔಷಧ ವ್ಯಾಪಾರಿಗಳು ಕೇವಲ ಶೇಕಡಾ 17 ರಷ್ಟು ಲಾಭದ ಮಿತಿಯಲ್ಲಿ ಕೆಲಸ ಮಾಡುತ್ತಾರೆ. ಹೀಗಿರುವಾಗ ಭಾರಿ ರಿಯಾಯಿತಿಗಳನ್ನು ನೀಡುವ ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ದೇಶಾದ್ಯಂತ ಇರುವ ಸಣ್ಣ ಕೆಮಿಸ್ಟ್ ಹಾಗೂ ಡ್ರಗಿಸ್ಟ್‌ಗಳ ಜೀವನೋಪಾಯವನ್ನು ರಕ್ಷಿಸಲು ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !