ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಂಜಾಬ್‌ನ ಸಂಗ್ರೂರ್ ನ್ಯಾಯಾಲಯವು ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ. 2026ರ ಸೆಪ್ಟೆಂಬರ್ 19ರಂದು ಕೋರ್ಟ್‌ಗೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆದುಕೊಳ್ಳುವಂತೆ ಅವರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಬಜರಂಗದಳ ಕಾರ್ಯಕರ್ತನ ದೂರು
2023ರ ಕರ್ನಾಟಕ ಶಾಸನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿತ ‘ಪಿಎಫ್‌ಐ’ (PFI) ಸಂಸ್ಥೆಯೊಂದಿಗೆ ಹೋಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಂಗ್ರೂರ್‌ನ ಬಜರಂಗದಳ ಬೆಂಬಲಿಗ ಹಿತೇಶ್ ಭಾರ್ದ್ವಾಜ್ ಅವರು ಖರ್ಗೆ ವಿರುದ್ಧ ಮಾನನಷ್ಟ ವ್ಯಾಜ್ಯ ಹೂಡಿದ್ದರು. ಈ ಸಂಘಟನೆಯನ್ನು ದೇಶವಿರೋಧಿ ಸಂಸ್ಥೆಗಳ ಸಾಲಿಗೆ ಸೇರಿಸಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ, 100 ಕೋಟಿ ರೂ. ಪರಿಹಾರ ಹಾಗೂ 10 ಲಕ್ಷ ರೂ. ನ್ಯಾಯಾಲಯದ ವೆಚ್ಚವನ್ನು ಭರಿಸುವಂತೆ ಅವರು ಕೋರಿದ್ದರು.
ಪ್ರಣಾಳಿಕೆ ಸೃಷ್ಟಿಸಿದ್ದ ವಿವಾದ
ಕಾಂಗ್ರೆಸ್ ತನ್ನ ಚುನಾವಣಾ ಭರವಸೆಯಲ್ಲಿ, ಸಮಾಜದಲ್ಲಿ ದ್ವೇಷ ಬಿತ್ತಿ ಶಾಂತಿ ಕದಡುವ ಬಜರಂಗದಳ ಮತ್ತು ಪಿಎಫ್‌ಐ ನಂತಹ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿತ್ತು. ಈ ನಿರ್ಧಾರವು ಆ ಸಮಯದಲ್ಲಿ ದೇಶದಾದ್ಯಂತ ದೊಡ್ಡ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಖರ್ಗೆ ಅವರಿಗೆ ಖುದ್ದು ಹಾಜರಾತಿಗೆ ಆದೇಶಿಸಿದೆ.



