ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮೀ ಯೋಜನೆ ಮಾರ್ಗಸೂಚಿ ಪ್ರಕಟ: ಈ ಷರತ್ತುಗಳು ಅನ್ವಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ಸರ್ಕಾರದ ಎರಡನೇ ಗ್ಯಾರಂಟಿಯಾದ ಗೃಹ ಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಬಿದ್ದಿದೆ. ಈ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಿದೆ.

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮುಂದಾಗಿತ್ತು. ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡಿತ್ತು. ಸದ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಯಾವೆಲ್ಲಾ ಷರತ್ತುಗಳು ಅನ್ವಯ ?

1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯವಾಗಲಿದೆ.
3. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್‌ ಖಾತೆ ಮತ್ತು ಆಧಾರ ಕಾರ್ಡ್‌ ಗಳನ್ನು ಜೋಡಣೆ ಮಾಡಬೇಕು.
4. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
5. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ:

ಈ ಯೋಜನೆಯ ಫಲಾನುಭವಿಗಳು ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡುವುದು. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌ ಮೂಲಕವಾಗಲಿ ಅಥವಾ ಭೌತಿಕವಾಗಿಯಾಗಲಿ ಅರ್ಜಿ ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!