ಆನ್​ಲೈನ್​ ಗೇಮಿಂಗ್ ರದ್ಧತಿ ವಿರುದ್ಧ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ: ವಿವಿಧ ಕಂಪನಿಗಳಿಗೆ ಸುಪ್ರೀಂ ನೋಟಿಸ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಆನ್​ಲೈನ್​ ಗೇಮಿಂಗ್​ ಮೇಲೆ ನಿಷೇಧವನ್ನು ರದ್ದುಗೊಳಿಸುವ ಹೈಕೋರ್ಟ್​ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಿದ್ದು, ಈ ವೇಳೆ ಕೌಶಲ್ಯ ಆಧಾರಿತ ಗೇಮಿಂಗ್ ಕಂಪನಿಗಳು ಮತ್ತು ಉದ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.

ಆನ್​ಲೈನ್​ ಗೇಮಿಂಗ್ ಹಾಗೂ ಗ್ಯಾಮ್ಲಿಂಗ್ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತ್ತು. ಆದರೆ, ಆನ್​ಲೈನ್​ ಗೇಮಿಂಗ್ ಮೇಲೆ ನಿಷೇಧ ಕುರಿತಾದ ಕರ್ನಾಟಕ ಪೊಲೀಸ್ ಕಾಯಿದೆಯ ವಿವಾದಾತ್ಮಕ ನಿಬಂಧನೆಗಳನ್ನು ಫೆಬ್ರವರಿ 14ರಂದು ಕರ್ನಾಟಕ ಹೈಕೋರ್ಟ್ ಅಸಾಂವಿಧಾನಿಕ ಎಂದು ಪರಿಗಣಿಸಿ ರದ್ದು ಮಾಡಿ ಆದೇಶಿಸಿತ್ತು. ಹೈಕೋರ್ಟ್​ನ ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾರ್ಚ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇತ್ತ ಇದೇ ರೀತಿಯ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಕೂಡ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಹೀಗಾಗಿ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ವಿ. ರಾಮ ಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯ ಪೀಠವು ಎರಡೂ ವಿಷಯಗಳನ್ನು ಒಟ್ಟಾಗಿ ವಿಚಾರಣೆ ನಡೆಸಿ ಈ ನೋಟಿಸ್​ ಜಾರಿ ಮಾಡಿದೆ.

ಕೌಶಲ್ಯ ಗೇಮಿಂಗ್ ಉದ್ಯಮ ಸಂಸ್ಥೆಯಾದ ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (ಎಐಜಿಎಫ್​), ಸ್ವಯಂ ನಿಯಂತ್ರಿತ ಫ್ಯಾಂಟಸಿ ಕ್ರೀಡಾ ಉದ್ಯಮ ಸಂಸ್ಥೆಯಾದ ಫೆಡರೇಶನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (ಎಫ್​ಐಎಫ್​ಎಸ್​), ಗೇಮಿಂಗ್ ಸಂಸ್ಥೆಗಳಾದ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್​), ಗೇಮ್ಸ್​ 24×7, ಹೆಡ್ ಡಿಜಿಟಲ್ ವರ್ಕ್ಸ್, ಜಂಗ್ಲೀ ಗೇಮ್ಸ್ ಮತ್ತು ಗೇಮ್ಸ್​​ಕ್ರಾಫ್ಟ್ ಸಂಸ್ಥೆಗಳಿಗೆ ನೋಟಿಸ್​ ಜಾರಿಗೊಳಿಸಲಾಗಿದೆ.

ಕಳೆದ ವರ್ಷ ಕೇರಳ ಮತ್ತು ಮದ್ರಾಸ್ ಹೈಕೋರ್ಟ್‌ಗಳು ಆನ್​ಲೈನ್​ ಗೇಮಿಂಗ್​ ನಿಷೇಧ ರದ್ದುಗೊಳಿಸಿದ್ದವು. ಅಲ್ಲದೇ, 2021ರ ಜುಲೈನಲ್ಲಿ ಸುಪ್ರೀಂಕೋರ್ಟ್ ಫ್ಯಾಂಟಸಿ ಕ್ರೀಡೆಗಳನ್ನು ಕೌಶಲ್ಯದ ಆಟವೆಂದು ಈ ಆದೇಶಗಳನ್ನು ಎತ್ತಿಹಿಡಿದಿತ್ತು. ಈಗ ಆನ್‌ಲೈನ್ ಗೇಮಿಂಗ್ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಯಂತ್ರಣ ನಿಯಮಗಳನ್ನು ರೂಪಿಸುತ್ತಿರುವಾಗಲೇ ಈ ಬೆಳವಣಿಗೆಗಳು ನಡೆಯುತ್ತಿವೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!