ಆನೆ ದಾಳಿಯಿಂದ ಸಾವಿಗೀಡಾದವರಿಗೆ ಪರಿಹಾರ ಮೊತ್ತ ದ್ವಿಗುಣಗೊಳಿಸಿದ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಡಾನೆ ದಾಳಿಯಿಂದ ಸಾವಿಗೀಡಾಗುವವರ ಪರಿಹಾರವನ್ನು ದ್ವಿಗುಣಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅದರಂತೆ ಪರಿಹಾರ ಮೊತ್ತ ₹7.5 ಲಕ್ಷದಿಂದ ₹15 ಲಕ್ಷಕ್ಕೆ ಏರಿಕೆಯಾಗಲಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಬಕಾರಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೊಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆನೆ ದಾಳಿಯಿಂದ ಶಾಶ್ವತ ಅಂಗವೈಕಲ್ಯಕ್ಕೆ ಈಗಿನ ₹ 5 ಲಕ್ಷದಿಂದ ₹ 10 ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ₹ 2.5 ಲಕ್ಷದಿಂದ ₹ 5 ಲಕ್ಷ, ಗಾಯಗೊಂಡವರಿಗೆ ₹ 30,000 ರಿಂದ ₹ 60,000 ಪರಿಹಾರ ನೀಡಲು ಸಭೆ ತೀರ್ಮಾನಿಸಿತು.
ಆಸ್ತಿ ಹಾನಿಗೆ ಸಂಬಂಧಿಸಿದಂತೆ ಪರಿಹಾರವನ್ನು ₹ 10,000 ರಿಂದ ₹ 20,000 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು. ಶಾಶ್ವತವಾಗಿ ಅಂಗವಿಕಲರಿಗೆ ಮಾಸಿಕ ಪಿಂಚಣಿ ₹2,000 ರಿಂದ ₹4,000 ನೀಡಲಾಗುವುದು. ಬೆಳೆ ಹಾನಿಗೆ ನೀಡುವ ಹಣವೂ ದುಪ್ಪಟ್ಟಾಗಿದೆ.
ಸಕಲೇಶಪುರ-ಬೇಲೂರು ಭಾಗದಲ್ಲಿ ಅನಾಹುತ ಸೃಷ್ಟಿಸುತ್ತಿರುವ ಎಂಟು ಆನೆಗಳನ್ನು ಹಿಡಿಯಲು ಹಾಗೂ ಸೆರೆ ಹಿಡಿದ ಆನೆಗಳ ಮೇಲೆ ನಿಗಾ ಇಡಲು ರೇಡಿಯೋ ಕಾಲರ್ ಹಾಕಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. “ಈಗಾಗಲೇ, 23 ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡಲು ರೇಡಿಯೊ-ಕಾಲರ್ ಮಾಡಲಾಗಿದೆ” ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!