ಪೋಕ್ಸೋ ಕಾಯ್ದೆ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಸಂತ್ರಸ್ತರಿಗೆ ಮಾಹಿತಿ ಒದಗಿಸುವುದು ಕಡ್ಡಾಯ: ಹೈಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್‌:
ಅಪ್ರಾಪ್ತರ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗುವ ಆರೋಪಿ ಜಾಮೀನಿಗೆಂದು ಅರ್ಜಿ‌ ಸಲ್ಲಿಸಿದರೆ, ಆ ಕುರಿತು ಸಂತ್ರಸ್ತರಿಗೆ ಅಥವಾ ಕೌನ್ಸಿಲ್ ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೌರ್ಜನ್ಯಕ್ಕೊಳಗಾದ ಮಕ್ಕಳ ಪೋಷಕರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಚೀಫ್ ಜಸ್ಟೀಸ್ ರಿತುರಾಜ್ ಅವಸ್ತಿ ಹಾಗೂ ಜಸ್ಟೀಸ್ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಗಳಿಗೆ ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯಿದೆ 2018 ರ ಸೆಕ್ಷನ್ 439(1) (A) ಪ್ರಕಾರ ಜಾಮೀನು ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯವು ದೂರುದಾರರಿಗೆ ಈ ಕುರಿತು ಮಾಹಿತಿ ನೀಡುವ ಅಗತ್ಯವಿದೆ. ಇದರಿಂದ ದೂರುದಾರರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ರೋಹನ್ ಕೊಠಾರಿ ವಾದ ಮಂಡಿಸಿದ್ದರು. ‌ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ಐಪಿಸಿ ಸೆಕ್ಷನ್ 376(3), 376-AB, 376-DA ಅಥವಾ 376-DB ಅಥವಾ ಪೋಕ್ಸೋ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆರೋಪಿಯಾಗಿರುವ ವ್ಯಕ್ತಿಯಿಂದ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿರುವ ಕುರಿತು ಸಂತ್ರಸ್ತರ ಕೌನ್ಸಿಲ್ ಅಥವಾ ಪೋಷಕರಿಗೆ ಮಾಹಿತಿಯನ್ನು ಒದಗಿಸಬೇಕು ಎಂದು ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!