ಹುಬ್ಬಳ್ಳಿ: ತಂದೆಯಿಂದಲೇ ಹತ್ಯೆಗೀಡಾದ ಆಭರಣ ವ್ಯಾಪಾರಿ; ಆರೋಪಿಗಳು ಪೊಲೀಸರ ಬಲೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹುಬ್ಬಳ್ಳಿ ಆಭರಣ ವ್ಯಾಪಾರಿಯೊಬ್ಬರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಾಥಮಿಕ ಆರೋಪಿ ಕೊಲೆಯಾದವನ ತಂದೆಯಾಗಿದ್ದು, ತನ್ನ ಮಗನನ್ನು ಕೊಲ್ಲಲು ಗೂಂಡಾಗಳನ್ನು ನೇಮಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಅಖಿಲ್ (26) ಹತ್ಯೆಗೀಡಾದ ಆಭರಣ ವ್ಯಾಪಾರಿಯಾಗಿದ್ದು, ಡಿಸೆಂಬರ್ 1 ರಂದು ಅವರನ್ನು ಕೊಲೆ ಮಾಡಲಾಗಿದೆ. ಡಿಸೆಂಬರ್ 3 ರಂದು ಅಖಿಲ್ ಸಂಬಂಧಿಕರೊಬ್ಬರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಕುಟುಂಬ ಸದಸ್ಯರ ವಿಚಾರಣೆ ನಂತರ ಅಖಿಲ್‌ನ ತಂದೆ ಮಗನನ್ನು ಕೊಲ್ಲಲು ಆರು ಜನರನ್ನು ನೇಮಿಸಿಕೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ” ಎಂದು ಹುಬ್ಬಳ್ಳಿ ಪೊಲೀಸ್ ಕಮಿಷನರ್ ಲಾಭು ರಾಮ್ ಹೇಳಿದ್ದಾರೆ.
ತಂದೆ ಮತ್ತು ಮಗನ ನಡುವಿನ ವೈಯಕ್ತಿಕ ಸಮಸ್ಯೆಗಳು ಹತ್ಯೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಎಲ್ಲಾ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಕೊಲೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಹುಬ್ಬಳ್ಳಿಯ ದೇವಕೊಪ್ಪದ ಕಬ್ಬಿನ ತೋಟದಲ್ಲಿ ಅಖಿಲ್‌ ಶವವನ್ನು ಹೂಳಲಾಗಿತ್ತು. ”ಪ್ರತಿಯೊಬ್ಬ ಆರೋಪಿಯ ಪಾತ್ರವೂ ಪತ್ತೆಯಾಗಬೇಕಿದೆ. ಪ್ರಮುಖ ಆರೋಪಿ ತಂದೆ ಅಖಿಲ್ ಕೊಲೆಯಾದ ಸ್ಥಳದಲ್ಲೇ ಆತನನ್ನು ಹಂತಕರಿಗೆ ಒಪ್ಪಿಸಿ ಒಬ್ಬಂಟಿಯಾಗಿ ಮನೆಗೆ ಮರಳಿದ್ದಾರೆ. ಅಖಿಲ್ ಮೃತದೇಹವನ್ನು ಆರೋಪಿಗಳು ಸಮೀಪದ ದೇವಿಕೊಪ್ಪದ ಕಬ್ಬಿನ ಗದ್ದೆಯಲ್ಲಿ ಹೂಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್), ವಿಧಿ ವಿಜ್ಞಾನ ವಿಭಾಗದ ತಜ್ಞರ ತಂಡವು ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದೆ. ಮತ್ತು ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!