ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಹೊಸದಿಗಂತ ವರದಿ ಮಂಗಳೂರು:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಕವಿ, ವಿಮರ್ಶಕ ಎಚ್. ಎಂ. ಪೆರ್ನಾಲ್ ಮಂಗಳೂರು, ಕೊಂಕಣಿ ಕಲಾ ಪ್ರಶಸ್ತಿಗೆ ಕೊಂಕಣಿ ನಾಟಕ, ಸಿನೆಮಾ, ಸಾಹಿತ್ಯ ಸಾಧಕ ರಮೇಶ್ ಕಾಮತ್ ಬೆಂಗಳೂರು, ಕೊಂಕಣಿ ಜಾನಪದ ಪ್ರಶಸ್ತಿಗೆ ಕೊಂಕಣಿ ಜಾನಪದ ಕ್ಷೇತ್ರದ ಸಾಧಕಿ ಕುಮುದಾ ಗಡಕರ್ ಕಾರವಾರ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಕೆ. ಜಗದೀಶ್ ಪೈ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.18ರಂದು ಸಂಜೆ 5 ಕ್ಕೆ ಬೆಂಗಳೂರಿನ ಮಲ್ಲೇಶ್ವರಂನ ಕಾಶೀಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್‌ನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಸಂಸದ ಡಿ.ವಿ. ಸದಾನಂದ ಗೌಡ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಪ್ರತಾಪಸಿಂಹ ನಾಯಕ್, ಉದ್ಯಮಿ ಡಾ.ಪಿ. ದಯಾನಂದ ಪೈ, ವಿವಿಧ ಗಣ್ಯರು ಭಾಗವಹಿಸುವರು. ಅಂದು ಬೆಳಗ್ಗೆ 9 ರಿಂದ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ, ಬಳಿಕ ಕೊಂಕಣಿ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅಕಾಡೆಮಿ ಸದಸ್ಯರಾದ ಅರುಣ್ ಜಿ.ಶೇಟ್, ಗೋಪಾಲಕೃಷ್ಣ ಭಟ್, ನವೀನ್‌ನಾಯಕ್, ಕೆನ್ಯುಟ್ ಜೀವನ್ ಪಿಂಟೊ, ರಿಜಿಸ್ಟ್ರಾರ್ ಮನೋಹರ್ ಕಾಮತ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!