ಹೊಸದಿಗಂತ ವರದಿ,ಮೈಸೂರು:
ಇಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವವು ಏ.25ರಂದು ನಡೆಯಲಿದ್ದು, ಈ ಬಾರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.
ಅಂದು ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಘಟಿಕೋತ್ಸವದಲ್ಲಿ ಬೆಂಗಳೂರಿನ ಆರ್.ವಿ.ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ, ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆ ಮುಖ್ಯಸ್ಥ ಈ.ಎಸ್.ಈಶ್ವರ್ ಹಾಗೂ ವಿ.ಆರ್.ಎಲ್ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸಂಕೇಶ್ವರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಕರಾಮುಕ್ತ ವಿವಿಯ ಕುಲಪತಿ ಡಾ.ಎಸ್.ವಿದ್ಯಾಶಂಕರ್ ತಿಳಿಸಿದರು.
ಶನಿವಾರ ಮುಕ್ತ ವಿವಿಯ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ, ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಭಾಗವಹಿಸಲಿದ್ದು, ರಾಜ್ಯ ಸರ್ಕಾರದ ಎಲೆಕ್ಟಾçನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನದ ನಿರ್ದೇಶಕ, ಕೆಎಸ್ಟಿಇಪಿಎಸ್ ನಿರ್ವಾಹಕ ನಿರ್ದೇಶಕ ಎ.ಬಿ.ಬಸವರಾಜು ಘಟಿಕೋತ್ಸವ ಭಾಷಣ ಮಾಡುವರು ಎಂದು ತಿಳಿಸಿದರು. ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ಆಯ್ಕೆ ಮಾಡಲಾಗಿದ್ದು, ಈ ಮೂವರ ಪೈಕಿ ಆನಂದ ಸಂಕೇಶ್ವರ್ ಕಿರಿಯ ವಯಸ್ಸಿನವರು. ಪತ್ರಿಕೋದ್ಯಮ, ಟಿವಿ ಮಾಧ್ಯಮ ಮತ್ತು ಲಾಜಿಸ್ಟಿಕ್ ಸೇವಾ ವಲಯದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪದವಿ ಪ್ರದಾನ ಮಾಡಲಾಗುತ್ತಿದ್ದು, ಯುವ ಉದ್ಯಮದಾರರಾಗಿ ಸಾವಿರಾರು ಜನರಿಗೆ ಉದ್ಯೋಗ ಅವಕಾಶ ನೀಡಿ ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಕುಲಪತಿ ಹೇಳಿದರು. ಎ.ವಿ.ಎಸ್.ಮೂರ್ತಿ ಅವರು ಶಿಕ್ಷ ಣತಜ್ಞರು, ಉತ್ತಮ ಆಡಳಿತಗಾರರು. ಆರ್.ವಿ.ವಿಶ್ವವಿದ್ಯಾಲಯದ ಸಮಕುಲಾಧಿಪತಿಯಾಗಿ ಕಾರ್ಯನಿರ್ವಹಿಸಿರುವ ಇವರು, ಅನೇಕ ಶಿಕ್ಷ ಣ ಸಂಸ್ಥೆಯ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಆರ್ವಿ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಈ.ಎಸ್.ಚಕ್ರವತಿ ಕೂಡ ಉತ್ತಮ ಆಡಳಿತಗಾರರು ಮತ್ತು ಶಿಕ್ಷ ಣತಜ್ಞರು. ಹಾಲಿ ಬೆಂಗಳೂರಿನ ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಒಟ್ಟು 8,338 ವಿದ್ಯಾರ್ಥಿಗಳಿಗೆ ಪದವಿ: ಈ ಬಾರಿಯೂ ಮಹಿಳಾ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು, ವಿವಿಧ ವಿಷಯಗಳಲ್ಲಿ ಪದವಿ ಪಡೆದ 3,272 ಪುರುಷರು ಮತ್ತು 5,066 ಮಹಿಳಾ ಅಭ್ಯರ್ಥಿಗಳು ಸೇರಿ 8,338 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 31 ಮಂದಿಗೆ ಪಿಹೆಚ್.ಡಿ ನೀಡಲಾಗುತ್ತಿದ್ದು, 48 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 38 ಅಭ್ಯರ್ಥಿಗಳಿಗೆ ನಗದು ಬಹುಮಾನ ಪ್ರದಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಡಾ.ಆರ್.ರಾಜಣ್ಣ ಡಾ.ಕೆ.ಬಿ.ಪ್ರವೀಣ (ಮೌಲ್ಯಮಾಪನ) ಉಪಸ್ಥಿತರಿದ್ದರು.