ಕರ್ನಾಟಕ ಯಕ್ಷಗಾನ ಅಕಾಡೆಮಿ | ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024 ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪಾರ್ತಿಸುಬ್ಬ ಪ್ರಶಸ್ತಿಯು 1 ಲಕ್ಷ ನಗದನ್ನು ಒಳಗೊಂಡಿದೆ ಎಂದರು.

ಅಕಾಡೆಮಿಯ ಗೌರವ ಪ್ರಶಸ್ತಿಗೆ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ರಾಘವ ದಾಸ್, ಸುಬ್ರಾಯ ಹೊಳ್ಳ, ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು 50 ಸಾವಿರ ನಗದನ್ನು ಒಳಗೊಂಡಿದೆ ಎಂದು ಹೇಳಿದರು.

ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಅಡ್ಕ ಗೋಪಾಲಕೃಷ್ಣ ಭಟ್‌, ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಉಮೇಶ್‌ ಕುಪ್ಪೆಪದವು, ಶಿವಾನಂದ ಗೀಜಗಾರು, ಮುಗ್ವಾ ಗಣೇಶ್‌ ನಾಯ್ಕ, ಸುರೇಂದ್ರ ಮಲ್ಲಿ, ಅಂಡಾಲ ದೇವಿಪ್ರಸಾದ ಶೆಟ್ಟಿ, ಕೃಷ್ಣಪ್ಪ, ಹಳುವಳ್ಳಿ ಜ್ಯೋತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ನಗದನ್ನು ಒಳಗೊಂಡಿದೆ ಎಂದರು.

ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ನಗದನ್ನು ಒಳಗೊಂಡಿದೆ ಎಂದರು.

ಮಾಂಬಾಡಿ ಸುಬ್ರಹ್ಮಣ್ಯ ಭಟ್
ಯಕ್ಷಗಾನದ ಕಲಾಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ತಿರುಗಾಟವನ್ನು ಮಾಡಿರುವುದರ ಜೊತೆಗೆ ಗುರುಪರಂಪರೆಯನ್ನು ಮೆರೆಸಿದ ಮಾಂಬಾಡಿ ಸುಬ್ರಮ್ಮಣ್ಯ ಭಟ್ಟರು ಜನಮನ್ನಣೆಗೆ ಒಳಗಾಗಿರುವ ಮೇಳದ ನಿವೃತ್ತ ಕಲಾವಿದರಾಗಿದ್ದಾರೆ. ಮಾಂಬಾಡಿ ಸುಬ್ರಮ್ಮಣ್ಯ ಭಟ್ಟರು ಮಾಂಬಾಡಿ ನಾರಾಯಣ ಭಾಗವತರ ಸುಪುತ್ರರಾಗಿ ತಂದೆಯ ಆದರ್ಶವನ್ನು ಮೆರೆಸಿದರು. ರಕ್ತಗತವಾಗಿ ಬಂದ ಪ್ರತಿಭೆಯೊಂದಿಗೆ ತಂದೆಯ ಮಾರ್ಗದರ್ಶನದಲ್ಲಿ ಪ್ರತಿಭಾವಂತರಾಗಿ ಬೆಳೆದ ಮಾಂಬಾಡಿ ಸುಬ್ರಮ್ಮಣ್ಯ ಭಟ್ಟರು ಕಟೀಲು, ಕರ್ನಾಟಕ, ಕದ್ರಿ, ಮುಂತಾದ ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದಾರೆ. ಕಲಾವಿದರ ಮನೋಧರ್ಮಕ್ಕೆ ತಕ್ಕಂತೆ ರಸಪೋಷಣೆಗೆ ಅನುಗುಣವಾಗಿ ಚಂಡೆ ಮದ್ದಳೆಯನ್ನು ನಯವಾಗಿ ನುಡಿಸುವ ಇವರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ತೆಂಕುತಿಟ್ಟಿನ ಪ್ರತಿಭಾ ವಲಯದಲ್ಲಿ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರು ಶಿಷ್ಯರನ್ನು ಹೊಂದಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!