ಕರ್ನಾಟಕದ ಅಭಿವೃದ್ಧಿ ಕಾಂಗ್ರೆಸ್​ ಗುಜರಿ ಇಂಜಿನ್​​ನಿಂದ ಅಸಾಧ್ಯ: ಕೋಲಾರದಲ್ಲಿ ಪ್ರಧಾನಿ ಗುಡುಗು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ಕಾಂಗ್ರೆಸ್​ ಗುಜರಿ ಇಂಜಿನ್​​ನಿಂದ ಅದು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು..

ಇಂದು ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿದ ಅವರು, ಬಿಜೆಪಿ ಸಮಾವೇಶದಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಚಿನ್ನದ ನಾಡು ಕೋಲಾರದಲ್ಲಿ ಜನರು ಸೇರಿರುವುದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಿದ್ದೆಗೆಡಿಸುವಂತಿದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಅಡ್ಡಿಯುಂಟು ಮಾಡುತ್ತಿದ್ದು, ಸಾರ್ವಜನಿಕರು ಈ ಪಕ್ಷಗಳನ್ನು ಕ್ಲೀನ್ ಬೌಲ್ಡ್ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಭ್ರಷ್ಟ ಸರಕಾರದಿಂದ ಕರ್ನಾಟಕದ ಜನತೆಯನ್ನು ರಕ್ಷಿಸಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಿದರು.

ಈ ಬಾರಿಯ ಚುನಾವಣೆ ಕೇವಲ ಚುನಾವಣೆಯಷ್ಟೇ ಅಲ್ಲ, ಮುಂದಿನ 25 ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವ ಗುರಿ ಹೊಂದಿದೆ. ರಾಜ್ಯದಲ್ಲಿ ಅಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಅಸ್ಥಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮೋದಿ ಕರೆ ನೀಡಿದರು.

ಕಾಂಗ್ರೆಸ್‌ ಕೇವಲ ಆ‍ಶ್ವಾಸನೆಗಳನ್ನು ನೀಡಿತ್ತು, ಆದರೆ ಬಿಜೆಪಿ ಕಾರ್ಯರೂಪಕ್ಕೆ ತಂದಿದೆ. ಬಿಜೆಪಿಗೆ ನೀಡುವ ನಿಮ್ಮ ಒಂದು ಮತದಿಂದ ಸಾಕಷ್ಟು ಬದಲಾವಣೆಗಳಾಗುತ್ತವೆ. ಬಹುಮತದ ಒಂದು ಸರ್ಕಾರ ಅಧಿಕಾರಕ್ಕೆ ಬಂದರೇ ಸಾಕಷ್ಟು ಬದಲಾವಣೆ ಸಾಧ್ಯ. ನಮ್ಮ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಕ್ಕಿದೆ. ಕೊರೋನಾ ಕಾಲದಲ್ಲಿ ನಾವು ಮಾಡಿದ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ವ್ಯಾಕ್ಸಿನೇಷನ್​ ಮೂಲಕ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ ಎಂದು ತಿಳಿಸಿದರು.

ಕರ್ನಾಟಕವನ್ನು ನಂ.1 ರಾಜ್ಯವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಡಬಲ್​ ಇಂಜಿನ್​ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ದಿಯಾಗುತ್ತದೆ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್​ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್​ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್​ನಂತಹ ಗುಜರಿ ಇಂಜಿನ್​​ನಿಂದ ಅಭಿವೃದ್ದಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಡಬಲ್​ ಇಂಜಿನ್​ ಸರ್ಕಾರದ ಮೂಲಕ ಕೋಲಾರ ಜಿಲ್ಲೆಗೆ ಅನೇಕ ಕೈಗಾರಿಕೆಗಳು ಬರುತ್ತಿವೆ. ಮುಳಬಾಗಿಲಿನ ದೋಸೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್​ನ ಸುಳ್ಳು ಗ್ಯಾರೆಂಟಿ ಯೋಜನೆ ಜಾರಿಗೆ ಬರುವುದಿಲ್ಲ. 2005 ರಿಂದ 2014ರವರೆಗೂ 10 ವರ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಕಾಂಗ್ರೆಸ್​ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ನೀಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ, ಅನೇಕ ಹಳ್ಳಿಗಳು ವಿದ್ಯುತ್​ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆದವು. ಕಾಂಗ್ರೆಸ್​ ದೇಶದ ಜನಕ್ಕೆ ಮೋಸ ಮಾಡಿದೆ. ನಂತರ ನಾವು ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ಪೂರೈಸಿದ್ದೆವು. ಅದಕ್ಕಾಗಿ ರಾಜ್ಯದಲ್ಲಿ ಜನ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮೋದಿ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!