ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ: ಇಬ್ಬರು ಶೂಟರ್ ಸೇರಿ ಮೂವರು ಆರೋಪಿಗಳ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್‌ ಸೇರಿ ಮೂವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಪೊಲೀಸರ ಅಪರಾಧ ವಿಭಾಗವು ರಾಜಸ್ಥಾನ ಪೊಲೀಸರೊಂದಿಗೆ ತಡರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಚಂಡೀಗಢದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಶೂಟರ್‌ಗಳಾದ ರೋಹಿತ್ ರಾಥೋಡ್, ನಿತಿನ್ ಫೌಜಿ ಹಾಗೂ ಸಹಚರ ಉಧಮ್ ಬಂಧಿತ ಆರೋಪಿಗಳು.

ದೆಹಲಿ ಪೊಲೀಸರು ರೋಹಿತ್ ಮತ್ತು ಉಧಮ್‌ನನ್ನು ದೆಹಲಿಗೆ ಕರೆತಂದಿದ್ದು, ನಿತಿನ್ ಫೌಜಿ ರಾಜಸ್ಥಾನ ಪೊಲೀಸರ ವಶದಲ್ಲಿದ್ದಾನೆ.

ಆರೋಪಿಗಳು ಕೊಲೆಯ ಬಳಿಕ ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ರಾಜಸ್ಥಾನದ ಹರಿಯಾಣದ ಹಿಸ್ಸಾರ್‌ಗೆ ತೆರಳಿದ್ದರು. ಬಳಿಕ ಹಿಮಾಚಲ ಪ್ರದೇಶದ ಮನಾಲಿಯಲ್ಲಿದ್ದರು. ಇದೀಗ ಚಂಡೀಗಢದಲ್ಲಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 5 ರಂದು ರಾಜಸ್ಥಾನದ ಜೈಪುರದಲ್ಲಿರುವ‌ ಮನೆಗೆ ನುಗ್ಗಿದ ಅಪರಿಚಿತರು ಸುಖದೇವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ ಗೊಗಮೆಡಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!