ಕಾರವಾರ-ಅಂಕೋಲಾ ಸಂಪರ್ಕ ಸೇತುವೆ ಕುಸಿತ: ತಜ್ಞರ ತಂಡ ಭೇಟಿ,ಪರಿಶೀಲನೆ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನ ಹಟ್ಟಿಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ಕಾರವಾರ ಮತ್ತು ಅಂಕೋಲಾ ಸಂಪರ್ಕ ಸಾಧಿಸುವ ಸೇತುವೆ ಕುಸಿದ ಪ್ರದೇಶಕ್ಕೆ ರಸ್ತೆ ನಿರ್ಮಾಣ ಐ.ಆರ್. ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಮತ್ತು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸೇತುವೆಯ ಬೇರಿಂಗ್ ತುಂಡಾದ ಭಾಗವನ್ನು ವೀಕ್ಷಿಸಿದ ತಜ್ಞ ಅಧಿಕಾರಿಗಳು ದೋಣಿ ಮೂಲಕ ಹಳ್ಳದ ನೀರಿನಲ್ಲಿ ತೆರಳಿ ಸೇತುವೆಯನ್ನು ಪರಿಶೀಲಿಸಿದರು.

ಸುಮಾರು 40 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಪಕ್ಕ ಚತುಷ್ಪತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದ್ದು ಹಳೆಯ ಸೇತುವೆಯನ್ನು ಕಾರವಾರ ಕಡೆ ಹೋಗುವ ವಾಹನ ಸಂಚಾರಕ್ಕೆ ಬಳಕೆ ಮಾಡಲಾಗುತ್ತಿದ್ದರೆ ಕಾರವಾರ ಕಡೆಯಿಂದ ಬರುವ ವಾಹನಗಳು ಹೊಸ ಸೇತುವೆ ಮೇಲಿಂದ ಸಾಗುತ್ತಿದ್ದವು.

ಎರಡು ದಿನಗಳ ಹಿಂದೆ ಕೊಲ್ಲಾಪುರದಿಂದ ಗೋವಾದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಟ್ರಾನ್ಸ್ ಫಾರ್ಮರ್ ಸಾಗಿಸುತ್ತಿದ್ದ ಮೂರು ಬೃಹತ್ ವಾಹನಗಳಲ್ಲಿ 138 ಚಕ್ರಗಳ ಮೊದಲ ಟ್ರಾಲಿ ವಾಹನ ಸಾಗುತ್ತಿದ್ದಂತೆ ಸೇತುವೆ ಕುಸಿದು ರಸ್ತೆ ಮಧ್ಯದಲ್ಲಿ ಬಿರುಕು ಕಂಡು ಬಂದಿತ್ತು.
ಇದರಿಂದಾಗಿ ರಸ್ತೆ ನಿರ್ಮಾಣ ಐ.ಆರ್. ಬಿ ಕಂಪನಿಯವರು ಸೇತುವೆ ಮೇಲೆ ವಾಹನ ಸಂಚಾರ ನಿಷೇದಿಸಿ ಸೇತುವೆಗೆ ಹೋಗುವ ದಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ ಎರಡೂ ಬದಿಯ ವಾಹನಗಳಿಗೆ ಹೊಸ ಸೇತುವೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಿದ್ದರು.

ಇದೀಗ ಅಧಿಕಾರಿಗಳ ತಂಡ ಆಗಮಿಸಿ ಸೇತುವೆ ಬೇರಿಂಗ್ ಮುರಿದು ಹೋಗಿರುವುದನ್ನು ಪರಿಶೀಲನೆ ನಡೆಸಿದ್ದು ಸದ್ಯದಲ್ಲೇ ಮುಂದಿನ ಕ್ರಮಗಳ ಕುರಿತು ವರದಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ಐ.ಆರ್. ಬಿ ಸಿಬ್ಬಂದಿಗಳು ಉಪಸ್ಥಿತರಿದ್ದು ಅಗತ್ಯ ಮಾಹಿತಿಗಳನ್ನು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!