ಹರೀಶ ಕುಲ್ಕುಂದ
ಹೊಸದಿಗಂತ ಮಂಗಳೂರು:
ಈ ಬಸ್ನಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡುವ ಜತೆಗೆ ರೇಡಿಯೇಟರ್ಗೆ ನೀರು ಹಾಕಬೇಕು. ವಾರದಲ್ಲಿ ಎರಡು- ಮೂರು ದಿನ ನಿಗದಿತ ಸಮಯಕ್ಕೆ ಈ ಬಸ್ ಕಾರ್ಯಾಚರಿಸುವುದೇ ಇಲ್ಲ. ವಾರದಲ್ಲಿ ಒಂದೆರಡು ದಿನ ಟ್ರಿಪ್ ರದ್ದಾಗುತ್ತದೆ…
ಕಾರವಾರ -ಸುಬ್ರಹ್ಮಣ್ಯ ನಡುವೆ ಸಂಚರಿಸುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಂಕೋಲ ಡಿಪೋದ ಬಸ್ನ ಅವ್ಯವಸ್ಥೆಯಿದು. ಈ ಬಸ್ ಪ್ರತಿದಿನ ಬೆಳಗ್ಗೆ 8ಕ್ಕೆ ಅಂಕೋಲದಿಂದ ಹೊರಟು ಕಾರವಾರಕ್ಕೆ ತೆರಳಿ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಹೊರಡುತ್ತದೆ. ಕಾರವಾರ- ಅಂಕೋಲ- ಹೊನ್ನಾವರ- ಭಟ್ಕಳ- ಕುಂದಾಪುರ-ಉಡುಪಿ- ಮಂಗಳೂರು- ಉಪ್ಪಿನಂಗಡಿ ಮಾರ್ಗವಾಗಿ ರಾತ್ರಿ 8.30ರ ವೇಳೆಗೆ ಸುಬ್ರಹ್ಮಣ್ಯಕ್ಕೆ ಆಗಮಿಸಬೇಕಿದೆ. ಸುಬ್ರಹ್ಮಣ್ಯದಿಂದ ಮರುದಿನ ಬೆಳಗ್ಗೆ 8.15ಕ್ಕೆ ಕಾರವಾರಕ್ಕೆ ಹೊರಡುತ್ತದೆ. ಈ ರೂಟ್ನಲ್ಲಿ ಸಂಚರಿಸುವ ಕೆಎ 31 A- 1539 ಹಾಗೂ KA 31 A- 1540 ಸಂಖ್ಯೆಯ ಎರಡೂ ಬಸ್ಗಳು ಹಳೆಯದಾಗಿದ್ದು, ಎಂಜಿನ್ ಬಿಸಿಯಾಗಿ ಅಥವಾ ಇತರ ಕಾರಣದಿಂದ ಆಗಾಗ್ಗೆ ದಾರಿ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಒಂದೋ ಸುಬ್ರಹ್ಮಣ್ಯಕ್ಕೆ ತಡವಾಗಿ ತಲುಪುತ್ತದೆ, ಇಲ್ಲವೇ ಭಟ್ಕಳ, ಉಡುಪಿ ಅಥವಾ ಮಂಗಳೂರಿನಲ್ಲಿ ಸಂಚಾರ ಮೊಟಕು ಗೊಳಿಸುತ್ತದೆ. ನಿಗದಿತ ಸಮಯಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿದರೆ ಪ್ರಯಾಣಿಕರ ಪುಣ್ಯ ಎಂಬಂತಾಗಿದೆ.
ಪ್ರಯಾಣಿಕರಿಗೆ ಹಿಂಸೆ
ಈ ಬಸ್ ಆಗಾಗ್ಗೆ ದಾರಿಮಧ್ಯೆ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರು ಹಿಂಸೆ ಅನುಭವಿಸುತ್ತಿದ್ದಾರೆ. ಸುಬ್ರಹ್ಮಣ್ಯಕ್ಕೆ ಕುಟುಂಬಿಕರ ಜತೆ ಆಗಮಿಸುವ ಅಥವಾ ಅಲ್ಲಿಂದ ವಾಪಸ್ ತೆರಳುವ ಪ್ರಯಾಣಿಕರು ಬಸ್ ಕೆಟ್ಟು ನಿಂತಾಗ ಇನ್ನೊಂದು ಬಸ್ಗೆ ಕಾದು ತಮ್ಮ ಲಗೇಜುಗಳ ಜತೆ ಬಸ್ ಬದಲಾವಣೆ ಮಾಡುವ ಕಿರಿಕಿರಿ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ. ರಾತ್ರಿ ವೇಳೆಯಂತೂ ವೃದ್ಧರು, ಮಹಿಳೆಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಚೇರಿ ಕೆಲಸ, ಇತರ ಬಸ್, ರೈಲಿನ ಸಮಯಕ್ಕೆ ಹೊಂದಾಣಿಕೆ ಮಾಡಿ ಈ ಬಸ್ನಲ್ಲಿ ಸಂಚರಿಸಿದರೆ ನಿಗದಿತ ಸಮಯಕ್ಕೆ ಗಮ್ಯಸ್ಥಾನಕ್ಕೆ ತಲುಪದೇ ಪೇಚಾಟ ಅನುಭವಿಸಬೇಕಿದೆ.
ಸುಸ್ಥಿತಿಯಲ್ಲಿರುವ ಬಸ್ ನೀಡಿ
ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತರು, ಕಚೇರಿ ಉದ್ಯೋಗಿಗಳು, ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರು ಮಂಗಳೂರಿನಿಂದ ಸಂಜೆ 5.30ಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡುವ ಈ ಬಸ್ನ್ನು ಅವಲಂಬಿಸಿದ್ದಾರೆ. ಈ ಬಸ್ ಪದೇ ಪದೇ ದಾರಿ ಮಧ್ಯೆ ಕೆಟ್ಟು ನಿಲ್ಲುವುದರಿಂದ, ತಡವಾಗಿ ಆಗಮಿಸುವುದರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.
ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸುಬ್ರಹ್ಮಣ್ಯಕ್ಕೆ 4.30ರ ಕೆಎಸ್ಆರ್ಟಿಸಿ ಬಸ್ ತೆರಳಿದ ಬಳಿಕ ಸಂಜೆ ೫.೩೦ಕ್ಕೆ ಕಾರವಾರ- ಸುಬ್ರಹ್ಮಣ್ಯ ಬಸ್ ಮಾತ್ರ ಇರುವುದು. ಈ ಬಸ್ ಬಾರದಿದ್ದರೆ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರು ಸಂಜೆ 6.30ರ ಬಸ್ಗೆ ಕಾಯಬೇಕು. ಸಂಜೆ ವೇಳೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಗಂಟೆಗೊಂದು ಬಸ್ ಇರುವ ಕಾರಣ ಕಾರವಾರ- ಸುಬ್ರಹ್ಮಣ್ಯ ಬಸ್ ನಿಗದಿತ ಸಮಯಕ್ಕೆ ಬಾರದಿದ್ದರೆ ಪ್ರಯಾಣಿಕರು ಮತ್ತೆ ಒಂದು ಗಂಟೆ ಕಾಯುವ ಸ್ಥಿತಿ. ಸುಬ್ರಹ್ಮಣ್ಯದಿಂದ ಬೆಳಗ್ಗೆ 8.15ಕ್ಕೆ ಹೊರಡುವ ಈ ಬಸ್ನ್ನು ಕಡಬ, ಉಪ್ಪಿನಂಗಡಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಉದ್ಯೋಗಿಗಳು, ಮಂಗಳೂರು ಕಡೆಗೆ ತೆರಳುವ ಭಕ್ತರು ಅವಲಂಬಿಸಿದ್ದಾರೆ. ಈ ಬಸ್ ಸಂಚಾರ ವ್ಯತ್ಯಯದಿಂದ ಎಲ್ಲರೂ ಪ್ರಸ್ತುತ ತೊಂದರೆ ಅನುಭವಿಸುತ್ತಿದ್ದಾರೆ. ಕಾರವಾರ- ಸುಬ್ರಹ್ಮಣ್ಯ ರೂಟ್ಗೆ ಹೊಸ ಬಸ್ ಅಥವಾ ಸುಸ್ಥಿತಿಯಲ್ಲಿ ಇರುವ ಬಸ್ ಒದಗಿಸಬೇಕು ಎಂಬುದು ನಿತ್ಯ ಪ್ರಯಾಣಿಕರ ಆಗ್ರಹ.
ಗ್ಯಾರಂಟಿ ಲಾಭವಿಲ್ಲ
ಪದೇ ಪದೇ ಈ ಬಸ್ ಕೈಕೊಡುವ ಕಾರಣ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಸಂಜೆ ವೇಳೆ ಕಾರವಾರ -ಸುಬ್ರಹ್ಮಣ್ಯ ಬಸ್ ಬಾರದಿರುವ ಕಾರಣ ಮಂಗಳೂರಿ ನಿಂದ ಉಪ್ಪಿನಂಗಡಿಗೆ ನಾವು ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು ಮಹಿಳಾ ನಿತ್ಯ ಪ್ರಯಾಣಿಕರು ದೂರಿದ್ದಾರೆ.
ಪದೇ ಪದೇ ಕೆಟ್ಟು ನಿಲ್ಲುವ ಬಸ್
ಕಾರವಾರ- ಸುಬ್ರಹ್ಮಣ್ಯ ಬಸ್ ನಿಗದಿತ ಸಮಯಕ್ಕೆ ಕಾರ್ಯಾಚರಿಸುತ್ತಿಲ್ಲ ಅಥವಾ ಪದೇ ಪದೇ ದಾರಿಮಧ್ಯೆ ಕೆಟ್ಟು ನಿಲ್ಲುತ್ತಿದೆ ಎಂಬ ವ್ಯಾಪಕ ದೂರುಗಳಿವೆ. ಏಪ್ರಿಲ್ 1, 3, 11, 12, 13, 29, ಮೇ 1, 4, 7, 10, 12ಕ್ಕೆ ನಿಗದಿತ ಸಮಯಕ್ಕೆ ಮಂಗಳೂರಿಗೆ ಬಂದಿಲ್ಲ ಅಥವಾ ದಾರಿಮಧ್ಯೆ ಕೆಟ್ಟು ನಿಂತಿದೆ. ಎರಡೂ ಬಸ್ಗಳಲ್ಲಿ ರೇಡಿಯೇಟರ್ ಬಿಸಿಯಾಗುವ ಸಮಸ್ಯೆಯಿದೆ. ಏ.೧೩ರಂದು ಉಪ್ಪಿನಂಗಡಿ ಸಮೀಪದ ಕುಂತೂರಿನಲ್ಲಿ, ಮೇ ೨೭ರಂದು ಉಪ್ಪಿನಂಗಡಿಯ ಕೊಯಿಲ ಬಳಿ ಈ ಬಸ್ ಕೆಟ್ಟು ನಿಂತಿತ್ತು. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನಾನು ಉದ್ಯೋಗ ನಿಮಿತ್ತ ಕಡಬದಿಂದ ಮಂಗಳೂರಿಗೆ ಪ್ರತಿದಿನ ಸರಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದೇನೆ. ಸಂಜೆ ಮಂಗಳೂರಿನಿಂದ ಕಡಬಕ್ಕೆ ತೆರಳಲು ಕಾರವಾರ- ಸುಬ್ರಹ್ಮಣ್ಯ ಬಸ್ ಅವಲಂಬಿಸಿದ್ದು, ಈ ಬಸ್ ಇತ್ತೀಚಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಮಂಗಳೂರಿನಿಂದ ಹೊರಡುತ್ತಿಲ್ಲ ಅಥವಾ ದಾರಿ ನಡುವೆ ಕೆಟ್ಟು ನಿಲ್ಲುತ್ತಿದೆ. ಈ ಬಗ್ಗೆ ಅಂಕೋಲ ಡಿಪೋಗೆ ಕರೆ ಮಾಡಿ ದೂರು ನೀಡಿದರೂ ಸ್ಪಂದನೆಯಿಲ್ಲ. ದಿನಕ್ಕೆ 450ಕಿ.ಮೀ. ದೂರ ಸಂಚರಿಸಬೇಕಿರುವ ಈ ರೂಟ್ಗೆ ಸುಸ್ಥಿತಿಯಲ್ಲಿರುವ ಬಸ್ ಒದಗಿಸಿ ಪ್ರಯಾಣಿಕರ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ನಿತ್ಯ ಪ್ರಯಾಣಿಕ ಸಂತೋಷ್ ಕೆ.ಎಚ್. ಕಡಬ.
ಹೊಸ ಬಸ್ ಬರಲಿದೆ
ಕಾರವಾರ- ಸುಬ್ರಹ್ಮಣ್ಯ ನಡುವೆ ಸಂಚರಿಸುವ ಅಂಕೋಲ ಡಿಪೋದ ಬಸ್ಗಳು ಹಳೆಯದಾಗಿವೆ. ಇದರಿಂದಾಗಿ ಕೆಲವೊಮ್ಮೆ ಸಂಚಾರ ವ್ಯತ್ಯಯ ಉಂಟಾಗುತ್ತಿದೆ. ಜೂನ್ನಲ್ಲಿ ಹೊಸ ಬಸ್ಗಳು ಬರಲಿದ್ದು, ಈ ರೂಟ್ಗೆ ಹೊಸ ಬಸ್ ಒದಗಿಸಲಾಗುವುದು. ಎನ್ನುತ್ತಿದ್ದಾರೆ ಅಂಕೋಲ ಡಿಪೋ ಮ್ಯಾನೇಜರ್ ಮಂಜುನಾಥ ನಾಯ್ಕ್.



