ಕಾಶ್ಮೀರ ಫೈಲ್ಸ್ ಇಂಪ್ಯಾಕ್ಟ್: ಶಾಲೆಗೆ ಕಾಶ್ಮೀರಿ ಪಂಡಿತ್ ನಾಯಕ ಟಿಕಾ ಲಾಲ್ ತಾಪ್ಲೂ ಹೆಸರು

ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ:
ಉತ್ತರ ದಿಲ್ಲಿಯಲ್ಲಿರುವ ಮುನ್ಸಿಪಲ್ ಶಾಲೆಗೆ ಪ್ರಮುಖ ಕಾಶ್ಮೀರಿ ಪಂಡಿತ್ ನಾಯಕ ಟಿಕಾ ಲಾಲ್ ತಾಪ್ಲು ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. 33 ವರ್ಷಗಳ ಹಿಂದೆ ಶ್ರೀನಗರದಲ್ಲಿ ಟಿಕಾಲಾಲ್‌ಗೆ ಗುಂಡು ಹಾರಿಸಲಾಗಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ಆರಂಭವಾದ ಕಾಶ್ಮೀರಿ ಪಂಡಿತರ ಸಮಸ್ಯೆಗಳ ಕುರಿತು ಬಿಸಿ ಬಿಸಿ ಚರ್ಚೆಯ ನಡುವೆಯೇ ಈ ಹೆಜ್ಜೆ ಇಡಲಾಗಿದೆ.
ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್ (ಎನ್‌ಡಿಎಂಸಿ) ಶಾಲೆಗೆ ಹೆಸರಿಡುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಎನ್‌ಡಿಎಂಸಿ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಅಲೋಕ್ ಶರ್ಮಾ ಮಾತನಾಡಿ, ಸೆಕ್ಟರ್-7ರಲ್ಲಿರುವ ಎನ್‌ಡಿಎಂಸಿ ಪ್ರಾಥಮಿಕ ಶಾಲೆ 7-ಬಿ ಹೆಸರನ್ನು ಶಹೀದ್ ಟಿಕಾ ಲಾಲ್ ತಾಪ್ಲು ಎಂದು ಬದಲಾಯಿಸಲಾಗಿದೆ. ಅವರು ಅನ್ ಸಂಗ್ ಹೀರೋ ಆಗಿದ್ದು, ತಡವಾಗಿ ಈ ನಾಯಕನಿಗೆ ನಮನಗಳನ್ನು ಸಲ್ಲಿಸಲಾಗುತ್ತಿದೆ ಎಂದರು.

ಯಾರೀ ಟಿಕಾ ಲಾಲ್ ತಾಪ್ಲು?
ಟಿಕಾ ಲಾಲ್ ತಾಪ್ಲು ಅವರು 1945ರಲ್ಲಿ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಕಲೆ ಮತ್ತು ಎಲ್.ಎಲ್.ಬಿ.ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಹ ಸಂಬಂಧ ಹೊಂದಿದ್ದರು. 1971ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ತಮ್ಮ ಸಾಮಾಜಿಕ ಕಾರ್ಯಗಳಿಂದಾಗಿ ಅವರು ಅತ್ಯಂತ ಜನಪ್ರಿಯ ನಾಯಕರಾದರು.
ಜುಲೈ 1988ರಲ್ಲಿ, ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸಲು ಒತ್ತಾಯಿಸಿ ಪ್ರತ್ಯೇಕತಾವಾದಿ ಬಂಡಾಯ ಚಳುವಳಿಯನ್ನು ಪ್ರಾರಂಭಿಸಿತು. ವಕೀಲ ಹಾಗೂ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಉಪಾಧ್ಯಕ್ಷ ಟಿಕಾಲಾಲ್ ತಾಪ್ಲು ಪ್ರತ್ಯೇಕತಾವಾದಿಗಳ ಮೊದಲ ಗುರಿಯಾಗಿದ್ದರು. 14 ಸೆಪ್ಟೆಂಬರ್ 1989 ರಂದು, ಶ್ರೀನಗರದ ಅವರ ಮನೆಯಲ್ಲಿ ಜೆಕೆಎಲ್ಎಫ್ ನಿಂದ ಕೊಲ್ಲಲ್ಪಟ್ಟರು. ಕಣಿವೆಯಲ್ಲಿ ನೆಲೆಸಿರುವ ಕಾಶ್ಮೀರಿ ಹಿಂದುಗಳ ಹೃದಯದಲ್ಲಿ ಭಯ ಮೂಡಿಸುವುದು ಈ ಭೀಕರ ಹತ್ಯೆಯ ಉದ್ದೇಶವಾಗಿತ್ತು.
ಅವರ ಹತ್ಯೆಯ ಮೊದಲು, ತಾಪ್ಲು ಪ್ರತ್ಯೇಕತಾವಾದಿಗಳಿಂದ ಹಲವಾರು ಬೆದರಿಕೆಗಳನ್ನು ಪಡೆದಿದ್ದರು ಮತ್ತು ದಾಳಿಗೆ ಒಳಗಾಗಿದ್ದರು. ಆದರೆ ಅವರು ಮತ್ತೆ ದಾಳಿ ಮಾಡುವಂತೆ ಸವಾಲು ಹಾಕಿದರು. ಸೆಪ್ಟೆಂಬರ್ 14ರಂದು ಚಿಂಕಾರದ ಅವರ ನಿವಾಸದಲ್ಲಿ ಭಯೋತ್ಪಾದಕರು ಅವರನ್ನು ಗುಂಡಿಕ್ಕಿ ಕೊಂದಿದ್ದರು.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲೂ ಅವರ ಹೆಸರು ಕೇಳಿಬಂದಿದೆ. ಶಾಲೆಗೆ ಅವರ ಹೆಸರಿಡಲು ಪ್ರೇರಣೆ ಈ ಚಿತ್ರದಿಂದ ಬಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು. ಅಲ್ಲದೇ ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿ, ಕಾಶ್ಮೀರಿ ಪಂಡಿತರ ನಿರ್ಗಮನವನ್ನು ನೆನಪಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!