ಕಸ್ತೂರಿ ರಂಗನ್ ವರದಿ ಬಾಧ್ಯಸ್ಥರೊಂದಿಗೆ ಸಮಾಲೋಚಿಸಲು ಸಂಜಯ್ ಕುಮಾರ್ ಸಮಿತಿಗೆ ಸಲಹೆ: ಖಂಡ್ರೆ

ಹೊಸ ದಿಗಂತ ವರದಿ , ಮಡಿಕೇರಿ:

ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲ. ಆದ್ದರಿಂದ ಇದನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆದಾಗ್ಯೂ ಕೇಂದ್ರ ಸರ್ಕಾರ ರಚಿಸೊರುವ ನಿವೃತ್ತ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿಗೆ ರಾಜ್ಯದ ಪಶ್ಚಿಮ ಘಟ್ಟದ ಎಲ್ಲಾ ಬಾಧ್ಯಸ್ಥರನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಕೋರಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಇತ್ತೀಚೆಗೆ ಸಂಜಯ್ ಕುಮಾರ್ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದಾಗ, ನೀವು ಕೊಡುಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ ಮೊದಲಾದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನವಸತಿಯಲ್ಲಿರುವ ನಿವಾಸಿಗಳೊಂದಿಗೆ ಸಮಾಲೋಚಿಸಿ ನಂತರ ವರದಿ ಸಿದ್ಧಪಡಿಸಬೇಕು ಎಂದು ಕೋರಿರುವುದಾಗಿ ಸ್ಪಷ್ಟಪಡಿಸಿದರು.

ಪರಿಸರ ಉಳಿಯಬೇಕು. ಈ ಕಾರ್ಯವನ್ನು ಪಶ್ಚಿಮ ಘಟ್ಟದ ಜನರು ಮಾಡುತ್ತಿದ್ದಾರೆ. ಆದಗ್ಯೂ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಉಳಿಸಲು ಈ ಸಮಿತಿ ರಚಿಸಿದೆ. ಕಸ್ತೂರಿ ರಂಗನ್ ವರದಿ 10 ವರ್ಷ ಹಳೆಯದಾಗಿದ್ದರೆ, ಗಾಡ್ಗೀಳ್ ವರದಿ ಅದಕ್ಕಿಂತ ಹಳೆಯದು. ಪ್ರಸಕ್ತ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ವರದಿಯಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಸಚಿವರು ನುಡಿದರು.

ಎಲ್ಲರೂ ಒಪ್ಪುವಂತಹ ವರದಿ ಬಂದರೆ ಶಾಸಕರೊಂದಿಗೆ, ಬಾಧ್ಯಸ್ಥರೊಂದಿಗೆ ಮತ್ತು ಸಚಿವ ಸಂಪುಟದ ಉಪ ಸಮತಿಯಲ್ಲಿ ಚರ್ಚಿಸಿ ಅಂತಿಮವಾಗಿ ಸರ್ಕಾರ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಹೇಳಿಕೆ ತಿರುಚಲಾಗಿದೆ: ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ತಾವು ಪಶ್ಚಿಮಘಟ್ಟದ ಜೀವಸಂಕುಲ, ಸಸ್ಯ ಸಂಕುಲ ಉಳಿಸಲು ಸರ್ಕಾರ ಬದ್ಧ ಎಂದು ನೀಡಿದ್ದ ಹೇಳಿಕೆಯನ್ನು ತಿರುಚಲಾಗಿತ್ತು. ಪರಿಸರ ಪ್ರಕೃತಿ, ಪಶ್ಚಿಮ ಘಟ್ಟದ ಜೀವ ಮತ್ತು ಸಸ್ಯ ಸಂಕುಲ ಉಳಿಯಬೇಕು ಇದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!