ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ಎರಡು ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.
ಇದೀಗ ಬಿಸಿಸಿಐ ಕೂಡ ಈ ಕುರಿತು ಮೌನ ಮುರಿದಿದೆ.
ಶುಕ್ರವಾರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ. ಮೇಲ್ಮನವಿ ಸಮಯ ಮುಗಿದಿರುವುದರಿಂದ ಎರಡು ಪಂದ್ಯದ ನಿಷೇಧವನ್ನು ಹಿಂತೆಗೆದುಕೊಳ್ಳಲು ಅಥವಾ ಸಡಿಲಿಸಲು ಮಂಡಳಿಯು ಮನವಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮಂಡಳಿಯ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಹರ್ಮನ್ಪ್ರೀತ್ ಅವರನ್ನು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದರು.
ಎರಡು ಪಂದ್ಯಗಳ ಅಮಾನತು ಕಾರಣದಿಂದಾಗಿ, ಹರ್ಮನ್ಪ್ರೀತ್ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡವು ಹೆಚ್ಚಿನ ಒತ್ತಡ ಅನುಭವಿಸಬೇಕಾಗಿದೆ.
ಬಾಂಗ್ಲಾದೇಶ ವಿರುದ್ಧದ ಐಸಿಸಿ ಮಹಿಳಾ ಚಾಂಪಿಯನ್ಷಿಪ್ ಸರಣಿಯ ಮೂರನೇ ಪಂದ್ಯದ ವೇಳೆ ಹರ್ಮನ್ಪ್ರೀತ್ ಎರಡು ಪ್ರತ್ಯೇಕ ನೀತಿ ಸಂಹಿತೆ ಉಲ್ಲಂಘಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಭಾರತದ ಚೇಸಿಂಗ್ ಸಮಯದಲ್ಲಿ ಎಲ್ಬಿಡಬ್ಲ್ಯು ಔಟ್ಗೆ ಒಳಗಾದ ಬಳಿಕ ನಿರಾಸೆಯಿಂದ ಸ್ಟಂಪ್ಗೆ ಹೊಡೆದಿದ್ದರು. ಇದು ಲೆವೆಲ್ 2 ಅಪರಾಧವಾಗಿದ್ದು, ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ. ಜತೆಗೆ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.
ಪಂದ್ಯದ ನಂತರ ಅವರು ಪಂದ್ಯದಲ್ಲಿ ಅಂಪೈರಿಂಗ್ ಮಾನದಂಡವನ್ನು ಪ್ರಶ್ನಿಸಿದ್ದರು. ಕರುಣಾಜನಕ ಅಂಪೈರಿಂಗ್ ಎಂದು ಕರೆದಿದ್ದರು. ಇದು ಕ್ರಿಕೆಟ್ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ನೀತಿ ಸಂಹಿತೆಯ ಆರ್ಟಿಕಲ್ 2.8ರ ಉಲ್ಲಂಘನೆ. ಪಂದ್ಯದ ಅಧಿಕಾರಿಯೊಬ್ಬರನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಯಿತು. ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿತ್ತು.