ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆ (Uniform Civil Code)ಕುರಿತು 22ನೇ ಭಾರತೀಯ ಕಾನೂನು ಆಯೋಗವು ಜನರಿಂದ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.
ಅಭಿಯಾನ ಶುರುವಾದ ಕೇವಲ 30 ದಿನಗಳಲ್ಲಿ 75 ಲಕ್ಷ ಜನ ಅಭಿಪ್ರಾಯ ತಿಳಿಸಿದ್ದಾರೆ. ಇದರಿಂದ ಜನರ ಅಭಿಪ್ರಾಯವನ್ನು ಆಧರಿಸಿ ಕೇಂದ್ರ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ.
ಕಾನೂನು ಆಯೋಗವು ಜುಲೈ 14ರವರೆಗೆ 30 ದಿನಗಳ ಜನ ಅಭಿಪ್ರಾಯನೀಡಲು ಅವಕಾಶ ನೀಡಿತ್ತು. ಅದರಂತೆ, 75 ಲಕ್ಷ ಜನ ಅಭಿಪ್ರಾಯ ತಿಳಿಸಿದ್ದಾರೆ.
ಇವುಗಳಲ್ಲಿ 2 ಲಕ್ಷ ಜನರ ಅಭಿಪ್ರಾಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾಗಿದೆ. ಹೆಚ್ಚಿನ ಜನ ಏಕರೂಪ ನಾಗರಿಕ ಸಂಹಿತೆ ಪರ ಅಭಿಪ್ರಾಯ ತಿಳಿಸಿದ್ದಾರೆ.
ಇನ್ನು ಜುಲೈ 28ರಿಂದಲೇ ಜನರ ಪ್ರತಿಕ್ರಿಯೆಗಳ ವಿಶ್ಲೇಷಣೆ ನಡೆಯಲಿದೆ ಎಂದು ಕಾನೂನು ಆಯೋಗ ತಿಳಿಸಿದೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕುರಿತು ಪರ ವಿರೋಧಗಳ ಚರ್ಚೆಯಾಗುತ್ತಿದೆ. ನ್ಯಾಯಾಲಯಗಳು ಕೂಡ ಸಂಹಿತೆ ಜಾರಿಗೊಳಿಸಿವೆ ಎಂದಿವೆ. ಇನ್ನು ಕೆಲವು ಇಸ್ಲಾಂ ಧಾರ್ಮಿಕ ಮುಖಂಡರು, ಸಂಸ್ಥೆಗಳು ಏಕರೂಪ ನಾಗರಿಕ ಸಂಹಿತೆಯ ಜಾರಿಯನ್ನು ವಿರೋಧಿಸಿವೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಸಂಹಿತೆ ಜಾರಿ ಪರವಾಗಿ ಮಾತನಾಡಿದ್ದಾರೆ.