‘ಕವಚ್’- ರೈಲ್ವೆ ಅಪಘಾತಗಳನ್ನು ರಕ್ಷಿಸೋಕೆ ಭಾರತ ಬಳಸಲಿದೆ ಅಚ್ಚರಿಯ ತಂತ್ರಜ್ಞಾನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸಿಕಂದರಾಬಾದ್: ಆ ಎರಡೂ ರೈಲುಗಳು ಒಂದೇ ಹಳಿಯಲ್ಲಿ ಎದುರಾಬದುರಾ ವೇಗವಾಗಿ ಬರುತ್ತಿದ್ದವು. ಸ್ಥಳದಲ್ಲಿರುವವರು ಇನ್ನೇನು ಡಿಕ್ಕಿಯಾಗುತ್ತವೆ ಎಂದು ಆತಂಕಿತರಾಗಿದ್ದರೆ, ಏಕಾಏಕಿ 380 ಮೀಟರ್ ಅಂತರದಲ್ಲಿ ಎರಡೂ ಎಂಜಿನ್‌ಗಳು ಸ್ತಬ್ಧವಾದವು.

ಇಂಥದ್ದೊಂದು ಸನ್ನಿವೇಶ ನಿರ್ಮಾಣವಾಗಿದ್ದು ದಕ್ಷಿಣ ಮಧ್ಯ ರೈಲ್ವೆಯ ಸಿಕಂದರಾಬಾದ್ ವಿಭಾಗದ ಲಿಂಗಂಪಲ್ಲಿ-ವಿಕಾರಾಬಾದ್ ವಿಭಾಗದಲ್ಲಿ ಗುಲ್ಲಗುಡ-ಚಿತ್ಗಿಡ್ಡ ರೈಲು ನಿಲ್ದಾಣಗಳ ನಡುವೆ. ಇದು ‘ಕವಚ್’ ಕಾರ್ಯಾಚರಣಾ ವ್ಯವಸ್ಥೆಯ ಪರೀಕ್ಷಾರ್ಥ ಚಾಲನೆ. ಖುದ್ದು ಕೇಂದ್ರ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಯೋಗವನ್ನು ಪರಿಶೀಲಿಸಿದರು. ಈ ವೇಳೆ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ವಿ.ಕೆ.ತ್ರಿಪಾಠಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗುಲ್ಲಗುಡದಿಂದ ಚಿತ್ಗಿಡ್ಡದ ಕಡೆಗೆ ಚಲಿಸಿದ ಎಂಜಿನ್‌ನಲ್ಲಿ ರೈಲ್ವೆ ಸಚಿವರು ಇದ್ದರು. ಇನ್ನೊಂದರಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷರಿದ್ದರು. ಪ್ರಯೋಗದ ವೇಳೆ ಎರಡೂ ಎಂಜಿನ್‌ಗಳು ಒಂದಕ್ಕೊಂದು ಮುಖಾಮುಖಿಯಾಗಿ ಚಲಿಸುತ್ತಿದ್ದರಿಂದ ಡಿಕ್ಕಿಯಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ಎಂಜಿನ್‌ನಲ್ಲಿದ್ದ ಕವಚ್ ವ್ಯವಸ್ಥೆಯು ಸ್ವಯಂಚಾಲಿತ ಬ್ರೇಕಿಂಗ್ ಶುರು ಮಾಡಿದ್ದರಿಂದ ಎಂಜಿನ್‌ಗಳನ್ನು 380 ಮೀಟರ್ ಅಂತರದಲ್ಲಿ ನಿಲ್ಲಿಸಿತು.

ಶೂನ್ಯ ಅಪಘಾತಗಳನ್ನು ಸಾಧಿಸುವ ಗುರಿಯಿಂದ ಈ ಕವಚ್ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ)ಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆ ಕವಚ್. ಇದು ಸೇಫ್ಟಿ ಇಂಟೆಗ್ರೆಟಿ ಲೆವೆಲ್-4ರ ಮಾನದಂಡಗಳ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಿಸ್ಟಮ್ ಆಗಿದೆ. ಇಂದು ಸ್ವಯಂಚಾಲಿತ ರೈಲು ರಕ್ಷಣೆ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದೆ. ಪರೀಕ್ಷೆಯ ಈ ವಿಡಿಯೋವನ್ನು ರೈಲ್ವೇ ಸಚಿವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕವಚ್ ರೈಲುಗಳು ಡೇಂಜರ್ (ಕೆಂಪು) ಸಂದರ್ಭದಲ್ಲಿ ಸಿಗ್ನಲ್ ದಾಟುವುದನ್ನು ತಡೆಯುವ ಮೂಲಕ ರಕ್ಷಣೆ ಒದಗಿಸುತ್ತದೆ. ಜೊತೆಗೆ ಡಿಕ್ಕಿಯಾಗುವುದನ್ನು ತಪ್ಪಿಸುತ್ತದೆ. ರೈಲಿನ ವೇಗವನ್ನು ನಿಯಂತ್ರಿಸಲು ಚಾಲಕ ವಿಫಲವಾದಲ್ಲಿ ಇದು ರೈಲು ಬ್ರೇಕಿಂಗ್ ವ್ಯವಸ್ಥೆಯನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುವಂತೆ ವಿನ್ಯಾಸ ಮಾಡಲಾಗಿದೆ. ಜೊತೆಗೆ ಇದು ಕ್ರಿಯಾತ್ಮಕ ಕವಚ್ ವ್ಯವಸ್ಥೆಯನ್ನು ಹೊಂದಿದ ಎರಡು ರೈಲು ನಡುವಿನ ಘರ್ಷಣೆಯನ್ನೂ ತಡೆಯುತ್ತದೆ. ಕವಚ್ ಅಗ್ಗದ, ಸೇಫ್ಟಿ ಇಂಟೆಗ್ರೆಟಿ ಲೆವೆಲ್-4ರ (ಎಸ್‌ಐಎಲ್-4) ಪ್ರಮಾಣೀಕೃತ ತಂತ್ರಜ್ಞಾನಗಳಲ್ಲಿ ಒಂದಾಗಿದೆ.

ಭಾರತೀಯ ರೈಲ್ವೇಗಳಲ್ಲಿ ಕವಚ ನಿಯೋಜನೆ ಕಾರ್ಯತಂತ್ರ:
ಶೇ. 96ರಷ್ಟು ರೈಲ್ವೆ ಸಂಚಾರವನ್ನು ಭಾರತೀಯ ರೈಲ್ವೇ ಹೈ ಡೆನ್ಸಿಟಿ ನೆಟ್ವರ್ಕ್ ಮತ್ತು ಹೆಚ್ಚು ಬಳಸಿದ ನೆಟ್ವರ್ಕ್ ಮಾರ್ಗಗಳಲ್ಲಿ ಸಾಗಿಸಲಾಗುತ್ತದೆ. ಈ ದಟ್ಟಣೆಯನ್ನು ಸುರಕ್ಷಿತವಾಗಿ ಸಾಗಿಸಲು, ರೈಲ್ವೆ ಮಂಡಳಿಯು ನಿಗದಿಪಡಿಸಿದ ಆದ್ಯತೆಯ ಪ್ರಕಾರ ಕವಚದ ಕಾಮಗಾರಿಗಳನ್ನು ಕೇಂದ್ರೀಕೃತ ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ.
ಆತ್ಮನಿರ್ಭರ ಭಾರತದ ಉಪಕ್ರಮದ ಭಾಗವಾಗಿ 2022ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ, 2022-23ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿ.ಮೀ. ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ಕವಚ್ ಅಡಿಯಲ್ಲಿ ತರಲು ಯೋಜಿಸಲಾಗಿದೆ. ಒಟ್ಟು ಸುಮಾರು 34,000 ಕಿ.ಮೀ. ರೈಲು ಜಾಲವನ್ನು ಕವಚ್ ಅಡಿಯಲ್ಲಿ ತರಲಾಗುತ್ತದೆ. ಸೌತ್ ಸೆಂಟ್ರಲ್ ರೈಲ್ವೇಯಲ್ಲಿ ಪ್ರಸ್ತುತ ನಡೆಯುತ್ತಿರುವ ಯೋಜನೆಗಳಲ್ಲಿ 1098 ಕಿ.ಮೀ. ಮಾರ್ಗ ಮತ್ತು 65 ಲೋಕೋ ರೈಲುಗಳಲ್ಲಿ ಕವಚವನ್ನು ನಿಯೋಜಿಸಲಾಗಿದೆ. ತಾಸಿಗೆ 160 ಕಿ.ಮೀ. ವೇಗಕ್ಕೆ ಅನುಮೋದಿಸಲಾಗಿದೆ. ಇದಲ್ಲದೆ, 160 ಕಿ.ಮೀ. ವೇಗವನ್ನು ಹೆಚ್ಚಿಸುವ ಮಿಷನ್ ರಾಫ್ತಾರ್ ಯೋಜನೆಯ ಭಾಗವಾಗಿ ಹೊಸದಿಲ್ಲಿ – ಮುಂಬೈ ಮತ್ತು ಹೊಸದಿಲ್ಲಿ – ಹೌರಾ ವಿಭಾಗಗಳಲ್ಲಿ ಅಳವಡಿಸಲಾಗುತ್ತದೆ.

ಕವಚ್‌ನ ವೈಶಿಷ್ಟ್ಯಗಳು
* ಡೇಂಜರ್ ಸಿಗ್ನಲ್ ಹಾದುಹೋಗುವಿಕೆ ತಡೆಗಟ್ಟುವಿಕೆ (ಎಸ್‌ಪಿಎಡಿ)
* ಡ್ರೈವರ್ ಮೆಷಿನ್ ಇಂಟರ್‌ಫೇಸ್ (ಡಿಎಂಐ) / ಲೋಕೊ ಪೈಲಟ್ ಕಾರ್ಯಾಚರಣೆ ಮತ್ತು ಸೂಚನೆ ಫಲಕ (ಎಲ್‌ಪಿಒಸಿಐಪಿ)ದಲ್ಲಿ ಸಿಗ್ನಲ್ ಅಂಶಗಳ ಪ್ರದರ್ಶನದೊಂದಿಗೆ ಚಲನೆಯ ಪ್ರಾಧಿಕಾರದ ನಿರಂತರ ನವೀಕರಣ
* ಅತಿ ವೇಗವನ್ನು ತಡೆಗಟ್ಟಲು ಸ್ವಯಂಚಾಲಿತ ಬ್ರೇಕಿಂಗ್
* ಲೆವೆಲ್ ಕ್ರಾಸಿಂಗ್ ಗೇಟ್‌ಗಳು ಸಮೀಪಿಸುತ್ತಿರುವಾಗ ಆಟೋ ವಿಶಲ್ ಹೊಡೆಯುವುದು.
* ಕ್ರಿಯಾತ್ಮಕ ಕವಚ್ ಹೊಂದಿದ ಎರಡು ರೈಲುಗಳ ನಡುವಿನ ಘರ್ಷಣೆಯನ್ನು ತಡೆಗಟ್ಟುವುದು.
* ತುರ್ತು ಸಂದರ್ಭಗಳಲ್ಲಿ ಎಸ್‌ಒಎಸ್ ಸಂದೇಶ ನೀಡುತ್ತದೆ.
* ನೆಟ್ವರ್ಕ್ ಮಾನಿಟರ್ ಸಿಸ್ಟಮ್ ಮೂಲಕ ರೈಲು ಚಲನೆಗಳ ಕೇಂದ್ರೀಕೃತ ನೇರ ಮೇಲ್ವಿಚಾರಣೆ.
* ಜಿಪಿಎಸ್, ರೇಡಿಯೋ ಫ್ರೀಕ್ವೆನ್ಸಿಯಂತಹ ವ್ಯವಸ್ಥೆಗಳಲ್ಲಿ ಕವಚ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!