ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರ ಯಾತ್ರಾ ತಾಣ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರುಶನ ನೀಡಿದ್ದಾಳೆ.
ಇಂದು ಮಧ್ಯರಾತ್ರಿ 1 ಗಂಟೆ 27 ನಿಮಿಷಕ್ಕೆ ಕಾವೇರಿ ತಾಯಿ ತೀರ್ಥೋದ್ಭವವಾಗಿದೆ. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥೋದ್ಭವವಾಗಿದ್ದು, ಈ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಕಾವೇರಿ ತೀರ್ಥೋದ್ಭವದ ನಂತರ ಅರ್ಚಕರು ಭಕ್ತರ ಮೇಲೆ ಕಾವೇರಿ ನೀರನ್ನು ಎರಚಿದ್ದಾರೆ. ನಿನ್ನೆ ಸಂಜೆ ೪ ಗಂಟೆಯಿಂದಲೇ ಬ್ರಹ್ಮ ಕುಂಡಿಗೆ ಬಳಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಕಲ್ಯಾಣಿಯ ಮೇಲ್ಭಾಗದಲ್ಲಿ ಭಕ್ತರಿಗೆ ಪವಿತ್ರ ತೀರ್ಥ ಹಂಚಲು ವ್ಯವಸ್ಥೆ ಮಾಡಲಾಗಿದೆ. ಕಾವೇರಿ ಮಾತೆಯ ಪ್ರೋಕ್ಷಣೆಯಿಂದಾಗಿ ಭಕ್ತರು ಪುನೀತರಾಗಿದ್ದಾರೆ.
ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎಲ್ಲೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ತಲಕಾವೇರಿಯ ಕುಂಡಿಕೆಯಲ್ಲಿ ಪ್ರತಿವರ್ಷವೂ ಕಾವೇರಿ ತೀರ್ಥ ರೂಪದಲ್ಲಿ ದರುಶನ ನೀಡುತ್ತಾಳೆ ಎನ್ನುವುದು ನಂಬಿಕೆ, ಈ ತಾಯಿಯನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷವೂ ಸಾವಿರಾರು ಭಕ್ತರು ಆಗಮಿಸುತ್ತಾರೆ.