Saturday, September 23, 2023

Latest Posts

ಭ್ರಷ್ಟ ಅಧಿಕಾರಿಯನ್ನು ಮರು ನಿಯೋಜಿಸಿದರೆ ಪ್ರತಿಭಟನೆ: ಕಾವೇರಿ ಸೇನೆ

ಹೊಸದಿಗಂತ ವರದಿ, ಕೊಡಗು:

ಲಂಚ ಸ್ವೀಕಾರದ ಆರೋಪ ಎದುರಿಸುತ್ತಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಯ ಮೇಲಿರುವ ಅಮಾನತು ಆದೇಶವನ್ನು ರದ್ದುಗೊಳಿಸಿ ಮತ್ತೆ ಕರ್ತವ್ಯಕ್ಕೆ ನಿಯೋಜಿಸಿದಲ್ಲಿ ತೀವ್ರ ರೀತಿಯ ಹೋರಾಟ ರೂಪಿಸುವುದಾಗಿ ಕಾವೇರಿ ಸೇನೆ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆ ಸಂಚಾಲಕ ಕೆ.ಎ.ರವಿಚಂಗಪ್ಪ ಅವರು, ಹುದ್ದೆಯ ಕೊರತೆಯ ನೆಪವೊಡ್ಡಿ ಭ್ರಷ್ಟ ಅಧಿಕಾರಿಯನ್ನು ಪಂಚಾಯತ್ ರಾಜ್ ಇಲಾಖೆಗೆ ನಿಯೋಜಿಸಲು ಶಾಸಕರೊಬ್ಬರು ಸಚಿವರಿಗೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದರಲ್ಲದೆ, ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದ ಅಧಿಕಾರಿ ಮತ್ತೆ ಕೊಡಗಿನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಲ್ಲಿ ಕಾವೇರಿಸೇನೆ ವತಿಯಿಂದ ತೀವ್ರ ರೀತಿಯ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಭ್ರಷ್ಟ ಅಧಿಕಾರಿ ಮತ್ತೆ ಹುದ್ದೆಯಲ್ಲಿ ಮುಂದುವರೆದರೆ ಗುತ್ತಿಗೆದಾರರಿಗೆ ಅಡ್ಡಿ, ಆತಂಕಗಳು ಎದುರಾಗಲಿವೆ. ಅಲ್ಲದೆ ಯಾವುದೇ ಶಿಕ್ಷೆಯಾಗಿಲ್ಲವೆಂದು ಅಧಿಕಾರಿಯ ಲಂಚಾವತಾರ ಮಿತಿ ಮೀರುವ ಎಲ್ಲಾ ಸಾಧ್ಯತೆಗಳಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳೂ ವಿಳಂಬವಾಗಬಹುದೆಂದು ರವಿಚಂಗಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೊಸಬೀಡು ಶಶಿ ಹಾಗೂ ಗುತ್ತಿಗೆದಾರ ಬಿ.ಎಂ.ನಂದಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!