ಹೊಸದಿಗಂತ ವರದಿ, ಕೊಡಗು:
ಗ್ರಾಮೀಣ ಪ್ರದೇಶದಲ್ಲಿ ತಯಾರಿಸುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಗುಡಿ ಕೈಗಾರಿಕೆಗಳು ಹೆಚ್ಚಾಗಬೇಕಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ಎನ್.ಶಂಕರನಾರಾಯಣ್ ಅವರು ತಿಳಿಸಿದ್ದಾರೆ.
ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೈಮಗ್ಗ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿಪುಲ ಅವಕಾಶವಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಉತ್ತೇಜನ ನೀಡಬೇಕಿದೆ ಎಂದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಅವರು ಮಾತನಾಡಿ, ಮೇಳದಲ್ಲಿ ಕೈಮಗ್ಗ ನೇಕಾರರು ತಾವು ಉತ್ಪಾದಿಸಿದ ಪರಿಶುದ್ಧ ರೇಷ್ಮೆ ಸೀರೆಗಳು, ಕಾಟನ್ ಸೀರೆಗಳು, ಕಾಂಚಿಪುರಂ ಸೀರೆಗಳು, ಮೊಣಕಾಲ್ಮೂರು ಸೀರೆಗಳು, ಇಳಕಲ್ ಸೀರೆಗಳು, ಟವಲ್, ಬೆಡ್‍ಶೀಟ್, ಲುಂಗಿ, ಕಂಚಿಕಾಟನ್ ಸೀರೆಗಳು, ಮತ್ತಿತರ ನಿತ್ಯ ಬಳಕೆಯ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಮೇಳದ ಅವಧಿಯಲ್ಲಿ ಗ್ರಾಹಕರು ಕೊಳ್ಳುವ ವಸ್ತುಗಳ ಮೇಲೆ ರಾಜ್ಯ ಸರ್ಕಾರದ ವಿಶೇಷ ಶೇ.20 ರಷ್ಟು ರಿಯಾಯಿತಿ ದೊರೆಯಲಿದೆ ಎಂದು ತಿಳಿಸಿದರು.
ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವು ಜ 12 ರ ವರೆಗೆ ನಡೆಯಲಿದೆ ಎಂದು ಗುರುಸ್ವಾಮಿ ಅವರು ಮಾಹಿತಿ ನೀಡಿದರು.
ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಪಾಂಡುರಂಗ, ಗೋಣಿಕೊಪ್ಪ ಹ್ಯಾಪ್‍ವಾಗ್ ಸಹಕಾರ ಸಂಘದ ಅಧ್ಯಕ್ಷ ದೇವಾನಂದ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪ ನಿರ್ದೇಶಕ ರಘು ಮತ್ತಿತರರು ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ