ಕಾವೇರಿ ವಸ್ತ್ರಸಿರಿ ‘ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ- ಮಾರಾಟ ಮೇಳ’ಕ್ಕೆ ಚಾಲನೆ

ಹೊಸದಿಗಂತ ವರದಿ, ಮಡಿಕೇರಿ:

ನಗರದ ಗಾಂಧಿ ಮೈದಾನದಲ್ಲಿ ಫೆ.15 ರವರೆಗೆ ಏರ್ಪಡಿಸಲಾಗಿರುವ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಅವರು ಗುರುವಾರ ಸಂಜೆ ಚಾಲನೆ ನೀಡಿದರು.
ಜವಳಿ ಅಭಿವೃದ್ಧಿ ಆಯುಕ್ತಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರದಲ್ಲಿ ಏರ್ಪಡಿಸಲಾಗಿರುವ ‘ಕಾವೇರಿ ವಸ್ತ್ರಸಿರಿ’ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ಹಿಂದಿನಿಂದಲೂ ಕೈಮಗ್ಗದಿಂದ ಉತ್ಪಾದಿಸಿದ ಬಟ್ಟೆಗಳನ್ನು ಧರಿಸುತ್ತಾ ಬರಲಾಗಿದೆ. ಆ ನಿಟ್ಟಿನಲ್ಲಿ ಗುಡಿ ಮತ್ತು ಸಣ್ಣ ಕೈಗಾರಿಕೆಗೆ ಒತ್ತು ನೀಡಲಾಗಿದೆ ಎಂದರು.
ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಜಿಲ್ಲೆಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮಾತನಾಡಿ, ಕಾವೇರಿಯ ತವರು ಮಡಿಕೇರಿಯಲ್ಲಿ ಕಾವೇರಿ ವಸ್ತ್ರಸಿರಿ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಹಾಗೆಯೇ ಜಿ.ಪಂ.ವತಿಯಿಂದ ಸಂಜೀವಿನಿ ಒಕ್ಕೂಟಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟ ಮೇಳ ಹಾಗೂ ಕೈಮಗ್ಗ ಉತ್ಪನ್ನಗಳ ಮಾರಾಟ ಮೇಳ ಏರ್ಪಡಿಸಿರುವುದು ವಿಶೇಷವಾಗಿದೆ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಚರಕದ ಮೂಲಕ ವಸ್ತ್ರ ನೇಯ್ದು ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ತಂದು ಕೊಟ್ಟರು. ಆ ನಿಟ್ಟಿನಲ್ಲಿ ಸ್ವದೇಶಿ ಕೈಮಗ್ಗ ಉತ್ಪನ್ನಗಳನ್ನು ಬಳಸುವಂತಾಗಬೇಕು. ಇದರಿಂದ ಇಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.
ಸರ್ಕಾರದಿಂದ ನೇಕಾರರಿಗೆ ವಿಮಾ ಸೌಲಭ್ಯ, ಸಾಲ ಸೌಲಭ್ಯ, ಜೊತೆಗೆ ಕೈಮಗ್ಗ ನೇಯ್ಗೆ ತರಬೇತಿ, ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿಯೂ ಸಹ ಪೊನ್ನಂಪೇಟೆ, ಕುಶಾಲನಗರದಲ್ಲಿ ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವುದು ಸಂತಸದ ವಿಚಾರ ಎಂದರು.
ಜನಸಾಮಾನ್ಯರು ಇಂತಹ ಮೇಳದಲ್ಲಿ ಭಾಗವಹಿಸಿ ಕೈಮಗ್ಗ ಉತ್ಪನ್ನಗಳನ್ನು ಖರಿದಿಸಿದಾಗ ಕೈಮಗ್ಗ ಉತ್ಪನ್ನಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅನಿತಾ ಪೂವಯ್ಯ ಅವರು ಸಲಹೆ ಮಾಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಅವರು, ಮೇಳದಲ್ಲಿ ಕೈಮಗ್ಗ ನೇಕಾರರು ಉತ್ಪಾದಿಸಿದ ರೇಷ್ಮೆ, ಕಾಟನ್, ಕಾಂಚಿಪುರಂ, ಮೊಣಕಾಲ್ಮೂರು, ಕಂಚಿಕಾಟನ್, ಇಳಕಲ್ ಸೀರೆಗಳು, ಟವಲ್, ಬೆಡ್‍ಶೀಟ್, ಲುಂಗಿ, ಕರವಸ್ತ್ರ ಮತ್ತಿತರ ನಿತ್ಯ ಬಳಕೆಯ ಕೈಮಗ್ಗ ವಸ್ತುಗಳನ್ನು ನೇರವಾಗಿ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರದ ಪಶ್ಚಿಮ ಬಂಗಾಳ, ರಾಜ್ಯದ ಚಿಕ್ಕಬಳ್ಳಾಪುರ, ಗದಗ, ಶಿರಸಿ, ಹಾಗೆಯೇ ಬಾಗಲಕೋಟೆ, ಗದಗ, ದಾವಣಗೆರೆ, ಬೆಂಗಳೂರು, ತುಮಕೂರು, ಹಾವೇರಿ, ಬೆಳಗಾವಿ, ಕುಶಾಲನಗರ, ಪೊನ್ನಂಪೇಟೆ, ಹಾಸನ, ಬೆಂಗಳೂರು ಗ್ರಾಮಾಂತರ ಹೀಗೆ ವಿವಿಧ ಜಿಲ್ಲೆಗಳಿಂದ ಕೈಮಗ್ಗ ಉತ್ಪಾದಕರು ಆಗಮಿಸಿ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. 20 ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಗುರುಸ್ವಾಮಿ ಅವರು ಹೇಳಿದರು. ನಗರಸಭೆ ಸದಸ್ಯೆ ಉಷಾ ಕಾವೇರಪ್ಪ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!