Wednesday, March 29, 2023

Latest Posts

ಬೆಂಬಲ ಬೆಲೆಯಡಿ ಕುಶಾಲನಗರದಲ್ಲಿ ಭತ್ತ-ರಾಗಿ ಖರೀದಿ ಆರಂಭ!

ಹೊಸದಿಗಂತ ವರದಿ, ಕುಶಾಲನಗರ:

ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕುಶಾಲನಗರದಲ್ಲಿ ಖರೀದಿ ಕೇಂದ್ರವನ್ನು ಆರಂಭಿಸಲಾಗಿದೆ.
ರಾಜ್ಯ ಸರಕಾರದ ತೀರ್ಮಾನದಂತೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು 2022-23 ನೇ ಸಾಲಿನ ಮುಂಗಾರು ಋತುವಿನಲ್ಲಿ ಜಿಲ್ಲೆಯ ರೈತರು ಬೆಳೆದ ಉತ್ತಮ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಖರೀದಿಸಲಾಗುತ್ತಿದ್ದು, ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರ ವ್ಯಾಪ್ತಿಯ ಕರ್ನಾಟಕ ರಾಜ್ಯ ಉಗ್ರಾಣ ಕೇಂದ್ರದ ಆವರಣದಲ್ಲಿ ಖರೀದಿ ಕೇಂದ್ರ ಆರಂಭಗೊಂಡಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಜನವರಿ 1ರಿಂದ ಭತ್ತ ಖರೀದಿ ನೊಂದಣಿ ಕಾರ್ಯ ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣ ಮತ್ತು ಸೋಮವಾರಪೇಟೆ ಕೃಷಿ ಉತ್ಪನ್ನ ಉಪ ಪ್ರಾಂಗಣದ ಆವರಣದಲ್ಲಿ ನಡೆದಿತ್ತು. ಅದರಂತೆ ಕುಶಾಲನಗರ ತಾಲೂಕಿನಿಂದ 74 ರೈತರು , ಸೋಮವಾರಪೇಟೆ ತಾಲೂಕಿನಿಂದ 99 ರೈತರು ನೊಂದಣಿ ಮಾಡಿಕೊಂಡಿದ್ದು, ರೈತರು ಭತ್ತದ ಬೆಳೆಯ ಕಟಾವು ಮಾಡಿ ಭತ್ತವನ್ನು ಕಣದಲ್ಲಿ ಸಿದ್ದತೆ ಮಾಡಿ ನಂತರ ಕೃಷಿ ಮಾರಾಟ ಮಂಡಳಿಯವರು ನೀಡಿದ ಚೀಲಗಳಲ್ಲಿ ತುಂಬಿಸಿ ತಂದು ಉಗ್ರಾಣ ಕೇಂದ್ರದಲ್ಲಿ ಹಾಕಲಾರಂಭಿಸಿದ್ದಾರೆ.
ಈಗಾಗಲೇ ಕೂಡ್ಲೂರು ಕೈಗಾರಿಕಾ ಕೇಂದ್ರದ ಉಗ್ರಾಣ ಕೇಂದ್ರದ ಆವರಣದಲ್ಲಿ ಈವರೆಗೆ ಆರಂಭಗೊಂಡಿರುವ ಭತ್ತ ಖರೀದಿ ಕೇಂದ್ರದಲ್ಲಿ ಕುಶಾಲನಗರ ತಾಲೂಕಿನ ನೋಂದಣಿಯಾದ 74 ರೈತರ ಪೈಕಿ 35 ರೈತರಿಂದ 786 ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗಿದೆ. ಸೋಮವಾರಪೇಟೆ ತಾಲೂಕಿನ 99 ಜನ ರೈತರಲ್ಲಿ 34 ಮಂದಿಯಿಂದ 1,118 ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಲಾಗಿದೆ.
ಸರಕಾರವು ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆಯಾಗಿ ಸಾಮಾನ್ಯ ಭತ್ತಕ್ಕೆ ರೂ 2,040.ರೂ, ಗ್ರೇಡ್ ಎ ಭತ್ತ ಕ್ಕೆ 2,060 ರೂ.ಗಳನ್ನು ನಿಗದಿ ಮಾಡಿದೆ.
ಅದೇ ರೀತಿ ರಾಗಿ ಖರೀದಿಗೆ ಜಿಲ್ಲೆಯ ಇಬ್ಬರು ರೈತರು ನೋಂದಣಿ ಮಾಡಿದ್ದು, ರಾಗಿಗೆ ಬೆಂಬಲ ಬೆಲೆಯಾಗಿ 3,578 ರೂ ನಿಗದಿಯಾಗಿದೆ.
ಖರೀದಿ ಏಜೆಂಟರಾಗಿ ಕರ್ನಾಟಕ ರಾಜ್ಯ ‌ಕೃಷಿ ಮಾರಾಟ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಖರೀದಿಯ ಅವಧಿಯು ಮಾ.31 ರವರೆಗೆ ಇರುತ್ತದೆ ಎಂದು ಜಿಲ್ಲಾ ಖರೀದಿ ಅಧಿಕಾರಿ ಸೋಮಯ್ಯ ಅವರು ತಿಳಿಸಿದ್ದಾರೆ.
ಉಗ್ರಾಣ ಕೇಂದ್ರದಲ್ಲಿ ಭತ್ತದ ಖರೀದಿ ಕೇಂದ್ರದ ಉದ್ಘಾಟನೆ ಸಂದರ್ಭ ಕುಶಾಲನಗರ ಕೃಷಿ ಉತ್ಪನ್ನ ‌ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರವಿಕುಮಾರ್, ಕುಶಾಲನಗರ ಖರೀದಿ ಕೇಂದ್ರದ ಅಧಿಕಾರಿ ರಾಜು ತಿಪ್ಪ ಶೆಟ್ಟಿ, ಸೋಮವಾರಪೇಟೆ ಕೇಂದ್ರದ ಅಧಿಕಾರಿ ಮಂಜುನಾಥ ಒಡೆಯರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!