Friday, June 2, 2023

Latest Posts

ಏ.25ರಿಂದ ಕೇದಾರನಾಥ ಯಾತ್ರೆ: ಪ್ರತಿದಿನ 13 ಸಾವಿರ ಯಾತ್ರಿಕರಿಗೆ ಮಾತ್ರ ದರುಶನಕ್ಕೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಪುರಾಣ ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಪ್ರಸಕ್ತ ವರ್ಷದ ಯಾತ್ರೆ ಏಪ್ರಿಲ್‌ 25ರಿಂದ ಪ್ರಾರಂಭವಾಗಲಿದೆ.

ಪ್ರತಿ ವರ್ಷ ಈ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುತ್ತಾರೆ. ಈ ಭಾರಿ ಕೇಂದ್ರವು ಯಾತ್ರೆಗಾಗಿ ತೆರಳುವವರಿಗೆ ಒಂದಷ್ಟು ನಿಯಮಗಳನ್ನು ಜಾರಿ ಮಾಡಿದೆ. ಪ್ರಸಕ್ತ ವರ್ಷ ಕೇದಾರನಾಥ ದೇಗುಲಕ್ಕೆ ಪ್ರತಿದಿನ 13,000 ಯಾತ್ರಿಕರು ಮಾತ್ರವೇ ಭೇಟಿ ನೀಡಬಹುದು ಎಂದು ಹೇಳಿದೆ. ಸರ್ಕಾರವು ಟೋಕನ್ ವ್ಯವಸ್ಥೆಯನ್ನು ಸಹ ಪರಿಚಯಿಸಿದೆ. ಇದನ್ನೆಲ್ಲ ಯಾತ್ರಿಕರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮಯೂರ್ ದೀಕ್ಷಿತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಏ.25ರಿಂದ ಆರಂಭವಾಗಲಿರುವ ಯಾತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದ ಡಿಎಂ ದೀಕ್ಷಿತ್ ಮತ್ತು ರುದ್ರಪ್ರಯಾಗದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಶಾಖ ಅಶೋಕ್ ಭದನೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಯಾತ್ರಾರ್ಥಿಗಳಿಗೆ ಈ ಬಾರಿ 22 ವೈದ್ಯರು ಮತ್ತು ಅಷ್ಟೇ ಸಂಖ್ಯೆಯ ಫಾರ್ಮಸಿಸ್ಟ್‌ಗಳನ್ನು ಯಾತ್ರೆ ಮಾರ್ಗದಲ್ಲಿ ನಿಯೋಜಿಸುವ ಮೂಲಕ ಉತ್ತಮ ವೈದ್ಯಕೀಯ ಸೇವೆ ಸಿಗಲಿದೆ. ಅವರಲ್ಲಿ ಮೂವರು ವೈದ್ಯರು ಮತ್ತು ಇಬ್ಬರು ಮೂಳೆ ಶಸ್ತ್ರಚಿಕಿತ್ಸಕರು ಇರುತ್ತಾರೆ. ಮಾರ್ಗದಲ್ಲಿ 12 ವೈದ್ಯಕೀಯ ಪರಿಹಾರ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ದೀಕ್ಷಿತ್ ಹೇಳಿದರು.

ಮಾರ್ಗದಲ್ಲಿ ಆರು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಅದರಲ್ಲಿ ಮೂರನ್ನು ಮೀಸಲು ಇಡಲಾಗಿದೆ ಮತ್ತು ಯಾವುದೇ ತುರ್ತು ಪರಿಸ್ಥಿತಿಗಾಗಿ ಸರ್ಕಾರದಿಂದ ಏರ್ ಆಂಬ್ಯುಲೆನ್ಸ್ ಅನ್ನು ಸಹ ವ್ಯವಸ್ಥೆ ಮಾಡಲಾಗಿದೆ. ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಗೆ ಯಾತ್ರೆಯ ಮಾರ್ಗವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನೀಡಲಾಗಿದೆ. ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿಡುವ ಕೆಲಸವನ್ನು ಕೇದಾರನಾಥ ನಗರ ಪಂಚಾಯತ್‌ಗೆ ವಹಿಸಲಾಗಿದೆ.

ಸುಲಭ್ ಇಂಟರ್‌ನ್ಯಾಶನಲ್‌ನಿಂದ ಶಾಶ್ವತ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ತ್ಯಾಜ್ಯ ನಿರ್ವಹಣೆಗಾಗಿ ಪ್ಲಾಸ್ಟಿಕ್‌ ಮತ್ತು ನೀರಿನ ಬಾಟಲಿಗಳಿಗೆ ಕ್ಯೂಆರ್‌ ಕೋಡ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಯಾತ್ರೆಯ ಮಾರ್ಗದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಕುದುರೆ, ಹೇಸರಗತ್ತೆಗಳ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತಿದೆ.

ಯಾತ್ರಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸೋನ್‌ಪ್ರಯಾಗದಿಂದ ಕೇದಾರನಾಥ ಧಾಮಕ್ಕೆ ಒಂಬತ್ತು ನೀರು ಶುದ್ಧಿಕಾರಿ ಘಟಕಗಳನ್ನು ಸ್ಥಾಪಿಸಿದೆ. ಗುಪ್ತಕಾಶಿಯಿಂದ ಬಡಿ ಲಿಂಚೋಲಿವರೆಗಿನ ಗರ್ವಾಲ್ ಮಂಡಲ್ ವಿಕಾಸ್ ನಿಗಮ್ (ಜಿಎಂವಿಎನ್) ಅತಿಥಿಗೃಹಗಳಲ್ಲಿ 2,500 ಜನರಿಗೆ ವಸತಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು.

ಇದಲ್ಲದೆ ಕೇದಾರನಾಥ ಧಾಮದ ನ್ಯೂ ಘೋಡಾ ಪದಾವ್ ಮತ್ತು ಹಿಮ್ಲೋಕ್ ಕಾಲೋನಿಯಲ್ಲಿ ತಲಾ 80 ಹಾಸಿಗೆಗಳ ಎರಡು ಟೆಂಟ್ ಕಾಲೋನಿಗಳನ್ನು ಸ್ಥಾಪಿಸಲಾಗುತ್ತಿದೆ. ಇದು 1,600 ಜನರಿಗೆ ಅವಕಾಶ ಕಲ್ಪಿಸುತ್ತದೆ. ಯಾತ್ರೆಯನ್ನು ವ್ಯವಸ್ಥಿತವಾಗಿ ನಡೆಸಲು 450 ಪೊಲೀಸ್ ಅಧಿಕಾರಿಗಳು ಮತ್ತು ನೌಕರರನ್ನು ನಿಯೋಜಿಸಲಾಗಿದ್ದು, ಹೊರ ರಾಜ್ಯಗಳ 150-200 ಪೊಲೀಸ್ ಸಿಬ್ಬಂದಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಸ್ಪಿ ತಿಳಿಸಿದರು.

ಯಾತ್ರೆಯ ಸಮಯದಲ್ಲಿ ಕಳೆದುಹೋದ ಮತ್ತು ಪತ್ತೆಯಾದವರಿಗಾಗಿ ಕೇಂದ್ರವೊಂದನ್ನು ಸಹ ನಿರ್ವಹಿಸಲಾಗುತ್ತದೆ. ಇದರೊಂದಿಗೆ ವಿವಿಧ ರಾಜ್ಯಗಳಿಂದ ಬರುವ ಯಾತ್ರಾರ್ಥಿಗಳಿಗಾಗಿ ವಿವಿಧ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಸಿದ್ಧಪಡಿಸಲಾಗಿದೆ. ತೀರ್ಥೋದ್ಭವದ ಸಮಯದಲ್ಲಿ ಆಗಾಗ ಉಂಟಾಗುವ ಟ್ರಾಫಿಕ್ ಅವ್ಯವಸ್ಥೆಯನ್ನು ನಿಭಾಯಿಸಲು ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!