ಹೊಸದಿಗಂತ ವರದಿ ಬೆಳಗಾವಿ:
ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಸುಳ್ಳುಸುದ್ದಿ ಹಾಗೂ ಪ್ರಚೋದನಾಕಾರಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದರೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಪೊಲೀಸ್ ಆಯುಕ್ತಾಲಯಕ್ಕೆ ಸೋಮವಾರ ಭೇಟಿ ನೀಡಿದ ಅವರು, ಸಾಮಾಜಿಕ ಜಾಲತಾಣ ನಿಗಾ ಘಟಕ, ನಿಯಂತ್ರಣ ಕೊಠಡಿಗಳನ್ನು ಖುದ್ದಾಗಿ ವೀಕ್ಷಿಸಿ ಸಲಹೆ-ಸೂಚನೆಗಳನ್ನು ನೀಡಿದರು. ಸೂಕ್ತ ತಾಂತ್ರಿಕ ತರಬೇತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲು ಸೂಚಿಸಿದರು.
ಇದಾದ ಬಳಿಕ ನಗರ ನಿಯಂತ್ರಣ ಕೊಠಡಿಯನ್ನು ಹಾಗೂ ವೈರ್ ಲೆಸ್ ವಿಭಾಗದ ಕಾರ್ಯಚಟುವಟಿಕೆಗಳನ್ನು ಹಾಗೂ ದಾಖಲೆ ಕೊಠಡಿಯನ್ನು ಖುದ್ದಾಗಿ ವೀಕ್ಷಿಸಿದರು. ನಿಯಂತ್ರಣ ಕೊಠಡಿಗೆ ಬರುವ ಕರೆಗಳು ಹಾಗೂ ಮಾಹಿತಿಯ ಲಾಗ್ ಪುಸ್ತಕವನ್ನು ಪರಿಶೀಲಿಸಿದರಲ್ಲದೇ ಪ್ರತಿಯೊಂದು ದಾಖಲೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಸಿಸಿಟಿವಿ ಮೇಲೆ ನಿಗಾವಹಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿಯೊಂದು ಕ್ಯಾಮೆರಾ ಅಳವಡಿಸಿರುವ ವೃತ್ತ ಮತ್ತು ರಸ್ತೆ ಕುರಿತು ಸಂಪೂರ್ಣ ಮಾಹಿತಿ ಇರಬೇಕು. ಇದಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೇಲೆ ಕೂಡ ನಿಗಾವಹಿಸಬೇಕು ಎಂದು ಹೇಳಿದರು.
ಪೊಲಿಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಡಿಸಿಪಿ ರೋಹನ್ ಜಗದೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧೀಕ್ಷಕ ಡಾ.ರವೀಂದ್ರ ಗಡಾದಿ, ಬೆಳಗಾವಿ ನಗರ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಸ್ನೇಹಾ ಸೇರಿದಂತೆ ಪೊಲೀಸ್ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.