ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸಿಎಂ ಅಧಿಕೃತ ನಿವಾಸ ಖಾಲಿ ಮಾಡಲಿದ್ದಾರೆ. ಜೊತೆ ಎಲ್ಲಾ ಸೌಲಭ್ಯಗಳನ್ನು ಮತ್ತು ಭದ್ರತೆ ತ್ಯಜಿಸಿ ಸಾಮಾನ್ಯರಂತೆ ಬದುಕುತ್ತಾರೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಅವರು ಬುಧವಾರ ತಿಳಿಸಿದರು.
ಕೇಜ್ರಿವಾಲ್ ಅವರ ರಾಜೀನಾಮೆಯ ನಂತರ ಆಪ್ (AAP) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಪ್ರಾಮಾಣಿಕತೆ ಮತ್ತು ತ್ಯಾಗ ಮನೋಭಾವ ಹೊಂದಿರುವ ಕೇಜ್ರಿವಾಲ್ ತಮ್ಮ ಸಿಎಂ ನಿವಾಸ ಹಾಗೂ ತಮಗೆ ಸಿಕ್ಕಿರುವ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ತ್ಯಜಿಸುತ್ತಾರೆ ಎಂದು ತಿಳಿಸಿದೆ.
ಕೇಜ್ರಿವಾಲ್ ಅವರಿಗೆ ದೆಹಲಿಯ ಜನ ಹೆಚ್ಚಿನ ಬಹುಮತದೊಂದಿಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಅವರು ಪ್ರಾಮಾಣಿಕತೆಯಿಂದ ದೆಹಲಿಯ ಜನರ ಸೇವೆ ಮಾಡಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ನಂತರ ತನಗೆ ಸಿಕ್ಕಿರುವ ಎಲ್ಲಾ ಸೌಲಭ್ಯಗಳನ್ನು ಹಾಗೂ ಒಂದು ವಾರದೊಳಗಾಗಿ ತಮ್ಮ ಮನೆಯನ್ನು ಖಾಲಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಕೇಜ್ರಿವಾಲ್ ಅವರು 2013 ರಲ್ಲಿ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿಯಾದಾಗಲೂ ಹಳೆಯ ನೀಲಿ ವ್ಯಾಗನ್ ಆರ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ಭದ್ರತೆಯ ಬಗ್ಗೆಯೂ ನಮಗೆ ಕಳವಳವಿದೆ. ಅವರ ಮೇಲೆ ಈ ಹಿಂದೆ ಹಲವಾರು ಬಾರಿ ದಾಳಿ ನಡೆದಿದೆ. ಅವರಿಗೆ ವಯಸ್ಸಾದ ಪೋಷಕರು, ಪತ್ನಿ, ಮಕ್ಕಳು ಇದ್ದಾರೆ. ಅವರೆಲ್ಲರ ಸುರಕ್ಷತೆಯ ಬಗ್ಗೆ ನಾವು ಚಿಂತೆ ಮಾಡುತ್ತಿದ್ದೇವೆ. ಅವರ ಭದ್ರತೆ ಅಪಾಯದಲ್ಲಿದೆ ಎಂದು ನಾವು ಅವರಿಗೆ ಹೇಳಲು ಪ್ರಯತ್ನಿಸಿದ್ದೇವೆ. ಆದರೂ, ಅವರು ಹೊರಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಿದರು.