ಕೇಜ್ರಿವಾಲ್‌ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್‌: ಆಪ್‌ ಕಚೇರಿ ತೆರವಿಗೆ ವಾರ್ನಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal)ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಆಮ್‌ ಆದ್ಮಿ ಪಕ್ಷದ (Aam Admy Party) ಕಚೇರಿಯನ್ನು ಜೂನ್‌ 15ರೊಳಗೆ ಸ್ಥಳಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್‌ (Supreme Court) ಗಡುವು ನೀಡಿದೆ.

ದೆಹಲಿಯ ರೋಸ್‌ ಅವೆನ್ಯೂ ಪ್ರದೇಶದಲ್ಲಿರುವ ಆಮ್‌ ಆದ್ಮಿ ಪಕ್ಷದ ಕಚೇರಿಯನ್ನು 2024ರ ಜೂನ್‌ 15ರೊಳಗೆ ಸ್ಥಳಾಂತರ ಮಾಡಬೇಕು. ಆಮ್‌ ಆದ್ಮಿ ಪಕ್ಷದ ಕಚೇರಿ ಇರುವ ಜಾಗವನ್ನು ದೆಹಲಿ ಹೈಕೋರ್ಟ್‌ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿಸ್ತರಣೆಗಾಗಿ ನೀಡಿದೆ. ಹಾಗಾಗಿ, ಆಮ್‌ ಆದ್ಮಿ ಪಕ್ಷವು ಕಚೇರಿಯನ್ನು ಸ್ಥಳಾಂತರಿಸಬೇಕುಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಆದೇಶ ಹೊರಡಿಸಿತು.

ಆಮ್‌ ಆದ್ಮಿ ಪಕ್ಷದ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, “ಚುನಾವಣೆ ಸಂದರ್ಭದಲ್ಲಿ ಪಕ್ಷದ ಕಚೇರಿ ಸ್ಥಳಾಂತರಗೊಳಿಸಿ ಎಂದರೆ ಕಷ್ಟವಾಗುತ್ತದೆ. ಇದಕ್ಕೆ 2-3 ತಿಂಗಳಾದರೂ ಬೇಕಾಗುತ್ತದೆ. ದೇಶದ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಆಮ್‌ ಆದ್ಮಿ ಪಾರ್ಟಿಯೂ ಒಂದಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ ಎಂಬುದಾಗಿ ಘೋಷಿಸಲಾಗಿದೆ. ಆದರೆ, ನಮಗೆ ಏನೂ ಸಿಕ್ಕಿಲ್ಲ.‌ ಎಲ್ಲ ಪಕ್ಷಗಳ ಕಚೇರಿಗಳು ಉತ್ತಮ ಸ್ಥಳಗಳಲ್ಲಿ ಇವೆ. ನಮಗೆ ಮಾತ್ರ ಬದರ್‌ಪುರದಲ್ಲಿ ಪಕ್ಷದ ಕಚೇರಿಗಾಗಿ ಜಾಗ ನೀಡಲಾಗಿದೆಎಂದು ತಿಳಿಸಿದರು.

ವಾದ ಆಲಿಸಿದ ನ್ಯಾಯಾಲಯವು, ಜೂನ್‌ 15ರ ಗಡುವು ನೀಡಿತು. ಹಾಗೆಯೇ, ಆಮ್‌ ಆದ್ಮಿ ಪಕ್ಷದ ಕಚೇರಿಯ ಜಾಗಕ್ಕಾಗಿ ಭೂಮಿ ಹಾಗೂ ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಿ ಎಂದು ಕೋರ್ಟ್‌ ಸೂಚಿಸಿತು. ಈಗ ಗಡುವಿಗೂ ಮೊದಲು ಪಕ್ಷ ಕಚೇರಿಯನ್ನು ಸ್ಥಳಾಂತರ ಮಾಡುವ ಅನಿವಾರ್ಯತೆಗೆ ಆಪ್‌ ಸಿಲುಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!