ಹೊಸದಿಗಂತ ವರದಿ, ಶಿವಮೊಗ್ಗ:
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ದೊರೆತಿರುವುದು ತಮ ಬದುಕಿನ ಸುದೈವ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಶುಕ್ರವಾರ ಇರುವಕ್ಕಿಯಲ್ಲಿ ನಡೆದ ಎಂಟನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಅವರು ಮಾತನಾಡಿದರು.
ಕರ್ಮ ಭೂಮಿಯ ನೆಲದಲ್ಲಿ ಗೌರವ ಡಾಕ್ಟರೇಟ್ ಸ್ವೀಕಾರ ಮಾಡುತ್ತಿರುವುದು ತಮ್ಮ ಸುದೈವ. ರೈತ ಮಕ್ಕಳ ನಡುವೆ ಈ ಗೌರವ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ರೈತರು ಜಗತ್ತಿಗೆ ಅನ್ನ ನೀಡಲು ಪಡುತ್ತಿದ್ದ ಕಷ್ಟ ನನ್ನಲ್ಲಿ ನೋವು ತರಿಸುತ್ತಿತ್ತು. ಅವರ ನೋವು ನೀಗಿಸಲು ಕೃಷಿ ಬಜೆಟ್ ಮಂಡನೆ ಮಾಡಿದೆ. ನೀರಾವರಿಗೆ ಆದ್ಯತೆ, ಕೃಷಿ ಕಾಲೇಜು ಗಳ ಆರಂಭ,ರೈತರಿಗೆ ನಾನಾ ಯೋಜನೆ ಗಳನ್ನು ಘೋಷಣೆ ಮಾಡಿದ್ದೆವು ಎಂದರು.
ಭಾರತದ ಆತ್ಮ ಹಳ್ಳಿಗಳಲ್ಲಿ ಇದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಗ್ರಾಮೀಣ ಸಮಸ್ಯೆಗಳು ಪರಿಹಾರ ಆಗಬೇಕು. ಅದಕ್ಕಾಗಿ ಸಾರಾಯಿ ನಿಷೇಧ ಜಾರಿಗೆ ತರಲಾಯಿತು ಎಂದರು.
ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದು ವೇದಗಳಲ್ಲಿ ಹೇಳಿದ್ದಾರೆ. ಕಾಯಕವೇ ಕೈಲಾಸ ಎಂದು ಬಸವಣ್ಣ ನವರು ಹೇಳಿದ್ದಾರೆ. ಅನ್ನದಾತರ ಶ್ರೇಯೋಭಿವೃದ್ಧಿಗಾಗಿ ಹೋರಾಟ ಮಾಡಲಾಯಿತು ಎಂದರು.
70 ರ ದಶಕದಲ್ಲಿ ಜೀತಮುಕ್ತಿಗಾಗಿ ಹೋರಾಟ, ಕೆಆರ್ಎಸ್ ವರೆಗೆ ಜಾಥಾ, ಬಗರ್ ಹುಕುಂ ರೈತರ ಪರ ಪಾದಯಾತ್ರೆ ಮೊದಲಾದ ಹೋರಾಟ ಈಗ ನೆನಪು. ಅವೆಲ್ಲ ನವಕರ್ನಾಟಕ ಇತಿಹಾಸ. ರೈತರ ಕಲ್ಯಾಣದ ಉದ್ದೇಶ ಮಾತ್ರ ಅದರಲ್ಲಿತ್ತು. ರೈತರ ಸರ್ವತೋಮುಖ ಕಲ್ಯಾಣಕ್ಕಾಗಿ ಬದುಕು ಮುಡಿಪಾಗಿಟ್ಟಿದ್ದೇನೆ ಎಂದರು.
ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಕೃಷಿ ಸಚಿವ ಚಲುವರಾಯಸ್ವಾಮಿ, ವಿಸಿ ಡಾ.ಜಗದೀಶ್, ಸಂಸದ ರಾಘವೇಂದ್ರ ಇನ್ನಿತರರು ಇದ್ದರು.