June 27, 2026
Saturday, June 27, 2026
spot_img

ಕೆಂಪೇಗೌಡರ ದೂರದೃಷ್ಟಿ ಇಂದಿನ ಆಡಳಿತಕ್ಕೂ ಮಾರ್ಗದರ್ಶಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಹೊಸದಿಗಂತ ವರದಿ ಚಿತ್ರದುರ್ಗ:

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ ಹಾಗೂ ವ್ಯವಸ್ಥಿತ ಆಡಳಿತ ವೈಖರಿಯನ್ನು ಇಂದಿನ ರಾಜಕಾರಣಿಗಳು, ಆಡಳಿತಗಾರರು ಮತ್ತು ಅಧಿಕಾರಿಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ’ ಸಮಾರಂಭದಲ್ಲಿ ನಾಡಪ್ರಭು ಕೆಂಪೇಗೌಡದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕೆಂಪೇಗೌಡರು ಅಂದು ಬೆಂಗಳೂರನ್ನು ಕಟ್ಟುವಾಗ ರೂಪಿಸಿದ ನೀಲನಕ್ಷೆ ಹಾಗೂ ಯೋಜನಾಬದ್ಧ ವಿನ್ಯಾಸ ಇಂದಿಗೂ ನಮಗೆಲ್ಲ ದಾರಿದೀಪವಾಗಿದೆ. ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬೆಂಗಳೂರಿಗೆ ಅವರೇ ಭದ್ರವಾದ ಅಡಿಪಾಯ ಹಾಕಿದವರು. ಪ್ರತಿಯೊಂದು ವ್ಯಾಪಾರ-ವಹಿವಾಟಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಅಂದಿನ ಕಾಲದ ಅತ್ಯಂತ ವೈಭವೋಪೇತ ಹಾಗೂ ಮಾದರಿ ನಗರಿಯಾಗಿದ್ದ ವಿಜಯನಗರ ಸಾಮ್ರಾಜ್ಯದ ಹಂಪಿಯಿಂದ ಪ್ರೇರಿತರಾಗಿದ್ದ ಕೆಂಪೇಗೌಡರು, ಹಂಪಿಯ ಮಾದರಿಯಲ್ಲೇ ಬೆಂಗಳೂರನ್ನು ಸುಂದರ ನಗರಿಯನ್ನಾಗಿ ಕಟ್ಟಲು ಸಂಕಲ್ಪ ಮಾಡಿ ಯಶಸ್ವಿಯಾದರು. ಕೇವಲ ವ್ಯಾಪಾರವಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿ, ನಗರದ ನೀರಿನ ದಾಹ ನೀಗಿಸಲು ಬೃಹತ್ ಕೆರೆಗಳನ್ನೂ ನಿರ್ಮಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:

ಅನ್ನಕ್ಕಿಂತ ಅಕ್ಷರ ಮುಖ್ಯ ಎಂಬುದನ್ನು ದೃಢವಾಗಿ ನಂಬಿದ್ದ ಕೆಂಪೇಗೌಡರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮುಂದಿನ ಪೀಳಿಗೆಗೆ ಉತ್ತಮ ವಿದ್ಯಾಭ್ಯಾಸ ಒದಗಿಸಿ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವುದು ಅವರ ಮುಖ್ಯ ಗುರಿಯಾಗಿತ್ತು. ಅವರ ಈ ಉನ್ನತ ದೂರದೃಷ್ಠಿಯ ಚಿಂತನೆಗಳು ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಸಲಹೆ ನೀಡಿದರು.

ಒಕ್ಕಲಿಗರ ಅಭಿವೃದ್ಧಿ ನಿಗಮದ ವತಿಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸುಮಾರು ೧೮ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಅದೇ ರೀತಿ, ಸ್ವಾವಲಂಬಿ ಸಾರಥಿ ಯೋಜನೆಯಡಿ 6 ಜನಕ್ಕೂ ಹೆಚ್ಚು ಫಲಾನುಭವಿಗಳಿಗೆ ಕಾರುಗಳನ್ನು ವಿತರಿಸುವ ಮೂಲಕ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 19 ಫಲಾನುಭವಿಗಳಿಗೆ ಉಚಿತ ಕೊಳವೆಬಾವಿ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಜಾ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಪಿ.ಚೇತನ್, ಕಾರ್ಯದರ್ಶಿ ಎಸ್.ಜಗನ್ನಾಥ್, ಮುಖಂಡರಾದ ಲಕ್ಷ್ಮೀಕಾಂತ್, ಕಂದಿಕೆರೆ ಸುರೇಶ್ ಬಾಬು, ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಸೇರಿದಂತೆ ಮತ್ತಿತರರು ಇದ್ದರು. ಹೊಸದುರ್ಗದ ಶಬೀನಾ ಬಾನು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ನಿರೂಪಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !