October 18, 2026
Sunday, October 18, 2026
spot_img

ಭೀಕರ ಪ್ರವಾಹಕ್ಕೆ ತತ್ತರಿಸಿದ ಅಸ್ಸಾಂ: ಸಾವಿನ ಸಂಖ್ಯೆ 78ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಸ್ಸಾಂನಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಮೃತರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ.

ಪ್ರವಾಹದಿಂದಾಗಿ ಜನರ ಬದುಕು ದುಸ್ಥಿರವಾಗಿದ್ದು, ಏಳು ಜಿಲ್ಲೆಗಳ 3 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಏಳು ಪ್ರವಾಹ ಪೀಡಿತ ಜಿಲ್ಲೆಗಳಾದ ಶಿವಸಾಗರ್, ಚಾರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ಬಿಸ್ವಾನಾಥ್ ಮತ್ತು ಕಾಮರೂಪ್ ಮೆಟ್ರೋಪಾಲಿಟನ್‌ಗಳಲ್ಲಿ 3,00,031 ಜನರು ಇನ್ನೂ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ವಿಪತ್ತು ರಕ್ಷಣಾ ಪಡೆಗಳು ತಿಳಿಸಿವೆ.

ರಾಜ್ಯಾದ್ಯಂತ 21,523.08 ಹೆಕ್ಟೇರ್ ಕೃಷಿ ಭೂಮಿ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದೆ. ಇತ್ತೀಚಿನ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಶಿವಸಾಗರದಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 71 ಪರಿಹಾರ ಶಿಬಿರಗಳಲ್ಲಿ 16,500 ಕ್ಕೂ ಹೆಚ್ಚು ಜನರು ಆಶ್ರಯಪಡೆದುಕೊಂಡಿದ್ದು, ಪ್ರವಾಹದಿಂದಾಗಿ ಒಡ್ಡುಗಳು, ರಸ್ತೆಗಳು, ಮನೆಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಆಸ್ತಿ ಸೇರಿದಂತೆ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. 11,000 ಕ್ಕೂ ಹೆಚ್ಚು ಪ್ರಾಣಿಗಳು ಕೊಚ್ಚಿ ಹೋಗಿವೆ ಎಂದು ತಿಳಿದು ಬಂದಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಪ್ರವಾಹ ಪರಿಸ್ಥಿತಿ ಮತ್ತು ನಡೆಯುತ್ತಿರುವ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಸಂಭಾಷಣೆಯ ವಿವರಗಳನ್ನು ಹಂಚಿಕೊಂಡ ಶರ್ಮಾ, ಗೃಹ ಸಚಿವರು ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು ಮತ್ತು ಪರಿಹಾರ, ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಭಾರತ ಸರ್ಕಾರವು ಮುಂದುವರಿಸಲಿದೆ ಎಂದು ಭರವಸೆ ನೀಡಿದ್ದರೆ ಎಂದು ತಿಳಿಸಿದರು.

Must Read