ಕುರಾನಿನಲ್ಲಿ ಹಿಜಾಬ್ ಪದಕ್ಕಿರುವ ಅರ್ಥವೇ ಬೇರೆ, ಈಗಿನದ್ದು ಅನುಮಾನಾಸ್ಪದ ಗಲಾಟೆ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್

  • ಯಾವುದೇ ಸಂಸ್ಥೆ ವಸ್ತ್ರ ಸಂಹಿತೆ ಅಳವಡಿಸಿಕೊಳ್ಳುವುದಕ್ಕೆ ಸ್ವತಂತ್ರ. ಅಲ್ಲಿ ಸೇರುವಾಗಲೇ ಈ ಬಗ್ಗೆ ಗೊತ್ತಿರುವುದರಿಂದ ಈಗ ಹಿಜಾಬ್ ಒತ್ತಾಯಿಸಿ ದಿಢೀರ್ ಬಂಡಾಯ ಅನುಮಾನಕ್ಕೆಡೆ ಮಾಡುತ್ತಿದೆ.
  • ಹಿಜಾಬ್ ಎಂದರೆ ಮುಖ ಮುಚ್ಚಲು ಬಳಸುವ ವಸ್ತ್ರ ಎಂದು ಕುರಾನಿನಲ್ಲಿ ಹೇಳಿಲ್ಲ.

ಇವು ನ್ಯೂಸ್18 ಸುದ್ದಿವಾಹಿನಿ ಜತೆಗಿನ ಸಂದರ್ಶನದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿರುವ ಅಂಶಗಳು.

ಯಾವುದೇ ಸಂಸ್ಥೆಗಳಲ್ಲಿ ಯಾವ ರೀತಿ ಡ್ರೆಸ್‌ಕೋಡ್ ಇರಬೇಕು ಎನ್ನುವ ನಿರ್ಧಾರ ಅವರಿಗೇ ಬಿಟ್ಟದ್ದು. ಈ ನಿರ್ಧಾರಕ್ಕೆ ಸಮ್ಮತಿಸಬೇಕು, ಇಲ್ಲವಾದರೆ ಬೇರೆ ಸಂಸ್ಥೆಗಳಿಗೆ ತೆರಳಬಹುದು ಎಂದಿದ್ದಾರೆ ರಾಜ್ಯಪಾಲ ಆರಿಫ್ ಮೊಹಮ್ಮದ್.

ಉತ್ತರಭಾರತದಲ್ಲಿ ಈ ಹಿಂದೆ ಮುಸುಕು ಎಳೆದುಕೊಳ್ಳುವ ಪದ್ಧತಿ ಬಂದಿದ್ದು ಆಕ್ರಮಣಕಾರರ ಕಾಲದಲ್ಲಿ. ಏಕೆಂದರೆ ಅವರು ಮಹಿಳೆಯರನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಿದ್ದರು. ಇದೀಗ ಉತ್ತರ ಭಾರತದ ಮಹಿಳೆಯರು ಅತಿ ಉದ್ದವಾದ ಮುಸುಕನ್ನು ಧರಿಸುವುದಿಲ್ಲ ಅಥವಾ ಧರಿಸುವುದು ಕಡ್ಡಾಯವೂ ಅಲ್ಲ. ಕಾಲ ಬದಲಾದಂತೆ ಪದ್ಧತಿಗಳೂ ಬದಲಾಗುತ್ತವೆ ಎಂದಿದ್ದಾರೆ.

ಹಿಂದಿನ ಸರ್ಕಾರಗಳು, ನಿಯಮಗಳು ಅಥವಾ ಶಿಸ್ತನ್ನು ಉಲ್ಲಂಘಿಸುವ ಜನರ ಮುಂದೆ ತಲೆಬಾಗುತ್ತಿದ್ದವು. ಆದರೆ ಈಗಿನ ಸರ್ಕಾರ ಆ ಕೆಲಸ ಮಾಡುತ್ತಿಲ್ಲ. ಅಂತೆಯೇ ಎಲ್ಲ ಬದಲಾವಣೆಗೂ ಸಮಯ ಬೇಕು. ಈ ಹಿಂದೆ ಹೆಣ್ಣುಮಕ್ಕಳನ್ನು ಭೂಮಿಯಡಿಯಲ್ಲಿ ಸಮಾಧಿ ಮಾಡಲಾಗುತ್ತಿತ್ತು. ಈಗ ಮುಸುಕು ಮತ್ತು ತ್ರಿವಳಿ ತಲಾಖ್‌ನಂಥ ನಿಯಮಗಳನ್ನು ಹಾಕಿ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.

ಒಂದು ಸಂಸ್ಥೆ ಎಂದರೆ ಅದರ ಡ್ರೆಸ್ ಕೋಡ್ ಬಗ್ಗೆ ತಿಳಿದುಕೊಂಡೇ ಆ ಕಾಲೇಜು ಅಥವಾ ಶಾಲೆಗೆ ಪ್ರವೇಶ ಪಡೆಯಲಾಗುತ್ತದೆ. ಗೊತ್ತಿದ್ದೂ ಪ್ರವೇಶ ಪಡೆದ ಮೇಲೆ ಈ ರೀತಿ ಡಿಧೀರ್ ಬಂಡಾಯ ಎದ್ದಿದ್ದು ಏಕೆ? ಕೆಲವು ರಾಜಕೀಯ, ರಹಸ್ಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಈ ರೀತಿ ವಿದ್ಯಾರ್ಥಿಗಳನ್ನು ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ.

“ಹಿಜಾಬ್ ಬೇಕು ಎಂಬುದಕ್ಕೆ ಧರ್ಮದ ಕಾರಣ ಉಲ್ಲೇಖಿಸುತ್ತಿರುವ ವಿದ್ಯಾರ್ಥಿಗಳ್ಯಾರೂ ಕುರಾನಿನ ಉಲ್ಲೇಖಗಳನ್ನು ತೋರಿಸುತ್ತಿಲ್ಲ. ಕುರಾನಿನಲ್ಲಿ ಹಿಜಾಬ್ ಎಂದರೆ ಮುಖ ಮುಚ್ಚುವ ಮುಸುಕು ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲಿರುವುದು ಖಿಮಿರ್ ಎನ್ನುವ ಪದ. ಇದರ ಅರ್ಥ ದುಪಟ್ಟಾ ಎಂದು. ಕುರಾನ್‌ನಲ್ಲಿ ಬಳಕೆಯಾಗಿರುವ ಮತ್ತೊಂದು ಪದ ಜಿಲ್ಬಾಬ್. ಇದರ ಅರ್ಥ ಅಂಗಿ ಎಂದು. ನಿಮ್ಮ ಸ್ಕಾರ್ಫ್‌ನ್ನು ಮುಖದ ಮೇಲೆ ಎಳೆಯಿರಿ ಎಂದು ಹೇಳಿಲ್ಲ, ಜಿಲ್ಬಾಬ್ ಮೇಲೆ ಎಳೆಯಿರಿ ಎನ್ನುವ ಉಲ್ಲೇಖ ಇದೆ. ಕುರಾನ್‌ನಲ್ಲಿ ಹಿಜಾಬ್ ಎನ್ನುವ ಪದವನ್ನು ಏಳು ಬಾರಿ ಬಳಸಲಾಗಿದೆ. ಆದರೆ ಎಲ್ಲಿಯೂ ಅದು ಬಟ್ಟೆ ಎಂದು ಹೇಳಿಲ್ಲ. ಹಿಜಾಬ್ ಎಂದರೆ ಪರದೆ, ಏಕಾಂತ, ಪ್ರತ್ಯೇಕತೆ ಎನ್ನುವ ಅರ್ಥ ಬರುತ್ತದೆ.”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!