ಆಟೋ ರಿಕ್ಷಾ ಚಾಲಕನಿಗೆ ಒಲಿದ ಕೇರಳ ಓಣಂ ಬಂಪರ್ ಲಾಟರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳದ ಆಟೋ ರಿಕ್ಷಾ ಚಾಲಕನಿಗೆ ಓಣಂ ಬಂಪರ್ ಲಾಟರಿಯ ಅದೃಷ್ಟ ಖುಲಾಯಿಸಿದ್ದು, 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದಿದ್ದಾರೆ.
ಈ ಆಟೋ ರಿಕ್ಷಾ ಚಾಲಕ ಬಾಣಸಿಗನಾಗಿ ಕೆಲಸ ಮಾಡಲೆಂದು ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದರು. ಇದಕ್ಕಾಗಿ 3 ಲಕ್ಷ ರೂ.ಗಳ ಸಾಲದ ಅರ್ಜಿಯನ್ನೂ ಸಹ ಅಂಗೀಕರಿಸಲಾಗಿತ್ತು. ಇದಾದ ಕೇವಲ ಒಂದು ದಿನದಲ್ಲೇ 25 ಕೋಟಿ ರೂ.ಗಳ ಓಣಂ ಬಂಪರ್ ಲಾಟರಿ ಬಂದಿದೆ.

ತಿರುವನಂತಪುರಂ ಬಳಿಯ ಶ್ರೀವರಾಹಂ ಮೂಲದ ಅನೂಪ್ ಎಂಬುವವರೇ ಈ ಲಾಟರಿ ಟಿಕೆಟ್ ವಿಜೇತರಾಗಿದ್ದು, TJ 750605 ಸಂಖ್ಯೆಯ ಟಿಕೆಟ್​​ನ್ನು ಶನಿವಾರವಷ್ಟೇ ಖರೀದಿಸಿದ್ದರು ಎಂಬುದೇ ಅಚ್ಚರಿ ಮತ್ತು ಕುತೂಹಲಕಾರಿ ವಿಷಯವಾಗಿದೆ.

ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಅನೂಪ್ ಖರೀದಿಸುತ್ತಿದ್ದರು. ಈ ಹಿಂದೆ ಕನಿಷ್ಠ ನೂರರಿಂದ ಗರಿಷ್ಠ 5 ಸಾವಿರ ರೂ.ವರೆಗೆ ಮೊತ್ತದ ಲಾಟರಿ ಹಣ ಗೆದ್ದಿದ್ದಾರೆ. ಹೀಗಾಗಿಯೇ ನನಗೆ ಇಂದು ಕೂಡ ಲಾಟರಿ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಅಲ್ಲದೇ, ನಾನು ಟಿವಿಯಲ್ಲಿ ಲಾಟರಿ ಫಲಿತಾಂಶಗಳನ್ನು ನೋಡುತ್ತಿರಲಿಲ್ಲ. ಆದರೆ, ನಾನು ನನ್ನ ಫೋನ್​ ಪರಿಶೀಲಿಸಿದಾಗ ಲಾಟರಿ ಗೆದ್ದಿರುವ ವಿಷಯ ಗೊತ್ತಾಯಿತು ಎಂದು ಅನೂಪ್ ತಿಳಿಸಿದರು.

ಆಟೋ ರಿಕ್ಷಾ ಚಾಲಕರಾದ ಅನೂಪ್​ ಮೊದಲಿಗೆ ಬೇರೆ ಸಂಖ್ಯೆಯ ಟಿಕೆಟ್​ ನೋಡಿದ್ದರು. ಆದರೆ, ಆ ಲಾಟರಿ ಟಿಕೆಟ್​ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಅವರು ಬೇರೆಯದನ್ನು ಆಯ್ಕೆ ಮಾಡಿಕೊಂಡು ಬಂಪರ್​ ಹೊಡೆದಿದ್ದಾರೆ ಎಂದು ಲಾಟರಿ ಮಾರಾಟದ ಏಜೆನ್ಸಿಯವರು ತಿಳಿಸಿದ್ದಾರೆ.

ಕೈಗೆ ಸಿಗಲಿದೆ 15 ಕೋಟಿ ರೂಪಾಯಿ: ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ.ಗಳ ಗೆದ್ದಿರುವ ಅನೂಪ್​ ಅವರಿಗೆ ತೆರಿಗೆ ಕಡಿತ ಸೇರಿ ಕೊನೆಗೆ ಸುಮಾರು 15 ಕೋಟಿ ರೂ. ಹಣ ಸಿಗಲಿದೆ. ಈ ಹಣದಲ್ಲಿ ಏನು ಮಾಡಲು ಉದ್ದೇಶಿಸಿದ್ದೀರಿ ಎಂಬ ಪ್ರಶ್ನೆಗೆ ಅವರು, ಮನೆ ನಿರ್ಮಿಸುವುದು ಮೊದಲ ಆದ್ಯತೆಯಾಗಿದೆ. ಜೊತೆಗೆ ಬಾಕಿ ಇರುವ ಸಾಲವನ್ನು ತೀರಿಸಲಾಗುವುದು ಎಂದು ತಿಳಿಸಿದರು. ಅದಲ್ಲದೆ, ನನ್ನ ಸಂಬಂಧಿಕರಿಗೆ ಸಹಾಯ ಮಾಡುತ್ತೇನೆ. ಕೆಲವು ಚಾರಿಟಿ ಕೆಲಸಗಳನ್ನೂ ಮಾಡುತ್ತೇನೆ. ಕೇರಳದ ಹೋಟೆಲ್ ಕ್ಷೇತ್ರದಲ್ಲಿ ಏನನ್ನಾದರೂ ಹೊಸದನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಅನೂಪ್​ ಹೇಳಿದ್ದಾರೆ. ಇದೇ ವೇಳೆ ಪತಿ ಜೊತೆಗೆ ಪತ್ನಿ ಮಾತನಾಡಿ, ಅನೂಪ್​ 22 ವರ್ಷಗಳಿಂದ ಟಿಕೆಟ್ ಖರೀದಿಸುತ್ತಿದ್ದಾರೆ. ಈಗ ಲಾಟರಿ ಹೊಡೆದ ಬಗ್ಗೆ ಎಲ್ಲರಿಗೂ ತಿಳಿದಾಗಿನಿಂದ ನಮಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!