ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ತಿಕ್ಕಾಟ: ಭಾರತ್ ಜೋಡೋಗೆ ಜನ ಕಳುಹಿಸಲು ಆಗಲ್ಲ ಎಂದವರಿಗೆ ಗೇಟ್‌ಪಾಸ್ ಕೊಟ್ಟ ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದ್ದು, ಈಗಾಗಲೇ ಸಿದ್ದರಾಮಯ್ಯ ಬಣ ಹಾಗೂ ಡಿಕೆ ಶಿವಕುಮಾರ್ ಬಣದ ನಡುವಿನ ತಿಕ್ಕಾಟದ ಮುನ್ಸೂಚನೆಗಳು ಅಲ್ಲಲ್ಲಿ ಕಾಣಿಸುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಭಾರತ್ ಜೋಡೋ ಯಾತ್ರೆಗೆ ಸಹಕರಿಸಿದ ನಾಯಕರ ವಿರುದ್ದ ಡಿಕೆ ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಜನರನ್ನು ಕಳುಹಿಸಲು ಆಗಲ್ಲ ಎಂದ ಹಿರಿಯ ನಾಯಕ ಆರ್ ವಿ ದೇಶಪಾಂಡೆಗೆ ಗೇಟ್ ಪಾಸ್ ನೀಡಲಾಗಿದೆ. ಕೆಲಸ ಮಾಡಲು ಆಗಲ್ಲ ಎಂದ ದೇಶಪಾಂಡೆಯನ್ನು ಭಾರತ್ ಜೋಡೋ ಯಾತ್ರೆಯ ಯಾವ ಕಮಿಟಿಯಲ್ಲೂ ಜವಾಬ್ದಾರಿ ನೀಡಿಲ್ಲ.ಇತ್ತ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ 18 ಕಮಿಟಿ ಮಾಡಿದ್ದಾರೆ. ಆದರೆ 18 ಕಮಿಟಿಯಲ್ಲೂ ದೇಶಪಾಂಡೆಗೆ ಸ್ಥಾನ ನೀಡಿಲ್ಲ. ಈ ಮೂಲಕ ಕೆಲಸ ಮಾಡಲು ಆಗಲ್ಲ ಎಂದವರ ಮೇಲೆ ಡಿಕೆ ಶಿವಕುಮಾರ್ ಶಿಸ್ತು ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ.

ಇತ್ತೀಚೆಗೆ ಡಿಕೆ ಶಿವಕುಮಾರ್ ಪ್ರತಿಯೊಬ್ಬರು ಕೆಲಸ ಮಾಡಬೇಕು. ಆಗಲ್ಲ, ಆಗುತ್ತಿಲ್ಲ ಎಂದವರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ ಎಂದು ಗುಡುಗಿದ್ದರು. ಇದೇ ವೇಳೆ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಗೆ ಜನರನ್ನು ಕಳುಹಿಸಲು ಆಗಲ್ಲ ಎಂದು ಆರ್ ವಿ ದೇಶಾಪಾಂಡೆ ಹೇಳಿದ್ದಾರೆ. ಐದು ವರ್ಷದಲ್ಲಿ ಒಂದು ದಿನ ರಾಹುಲ್ ಗಾಂಧಿ ಜೊತೆ ಕೆಲಸ ಮಾಡೋಕೆ ಆಗಲ್ಲ ಅಂದರೆ ಹೇಗೆ ಎಂದು ಡಿಕೆಶಿ ಪ್ರಶ್ನಿಸಿದ್ದರು.
ಭಾರತ ಐಕ್ಯತಾ ಯಾತ್ರೆಗೆ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದೇವೆ. ಅದಕ್ಕೂ ಕೆಲಸ ಮಾಡಬೇಕು. ಇದು ಅಸಹಕಾರದ ಪ್ರಶ್ನೆಯಲ್ಲ. ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಡಿಕೆಶಿ ಹೇಳಿದ್ದರು. ನಾನು ನಮ್ಮ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿ ತಿಳಿಸಿದ್ದೇನೆ ಅಷ್ಟೇ. ನಮ್ಮ ಶಾಸಕರುಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಟಾರ್ಗೆಟ್‌ ನೀಡಿದ್ದಾರೆ. ಕೆಲಸ ಮಾಡದವರಿಗೆ ಟಿಕೆಟ್‌ ಯಾಕೆ ನೀಡಬೇಕು ಎಂದು ಹೇಳಿದ್ದಾರೆ. ಶಾಸಕರು ಎಂದರೆ ಕೇವಲ ಮದುವೆ ಸಮಾರಂಭ, ಟೇಪ್‌ ಕಟ್‌ ಕಾರ್ಯಕ್ರಮಕ್ಕೆ ಹೋಗುವುದಲ್ಲ. ಮನೆ ಮನೆಗೆ ಹೋಗಿ ಬೂತ್‌ ಯಾತ್ರೆ ಮಾಡಬೇಕು. ಅವರು ಮೊದಲು ತಮ್ಮ ಹೊಲದಲ್ಲಿ ಚೆನ್ನಾಗಿ ಬೇಸಾಯ ಮಾಡಬೇಕು. ನಂತರ ಬಿತ್ತನೆ ಮಾಡಿ ಬಳಿಕವಷ್ಟೇ ಪ್ರತಿಫಲ ಆಪೇಕ್ಷಿಸಬೇಕು ಎಂದು ಹೇಳಿದ್ದೇನೆ ಎಂದು ಸೂಚ್ಯವಾಗಿ ತಿಳಿಸಿದರು.

ಬಳ್ಳಾರಿ ಬೃಹತ್‌ ಸಮಾವೇಶದ ಜವಾಬ್ದಾರಿಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ನೇತೃತ್ವದ ಸಮಿತಿಗೆ, ಪ್ರಚಾರದ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಉಳಿದಂತೆ ಸಂಚಾರ ವ್ಯವಸ್ಥೆಯ ನಿರ್ವಹಣೆಗೆ ಎಚ್‌.ಎಂ.ರೇವಣ್ಣ ನೇತೃತ್ವದ ಸಮಿತಿ, ಪ್ರತಿನಿತ್ಯದ ಸಭೆಗಳ ಜವಾಬ್ದಾರಿಯನ್ನು ನಿರ್ವಹಿಸಲು ಕೃಷ್ಣಬೈರೇಗೌಡ ನೇತೃತ್ವದ ಸಮಿತಿ, ವಾಸ್ತವ್ಯ ವ್ಯವಸ್ಥೆಗೆ ದಿನೇಶ್‌ ಗುಂಡೂರಾವ್‌ ನೇತೃತ್ವದ ಸಮಿತಿ, ಮೈಸೂರು-ಚಾಮರಾಜನಗರ ಭಾಗದ ಉಸ್ತುವಾರಿಗೆ ಧ್ರುವನಾರಾಯಣ ನೇತೃತ್ವದ ಸಮಿತಿ ರಚಿಸಲಾಗಿದೆ. ಇದರ ಜೊತೆಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಇನ್ನು 5 ಮಹಿಳಾ ತಂಡಗಳನ್ನು ರಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!