Wednesday, March 29, 2023

Latest Posts

ಕೇರಳ ರಾಜ್ಯ ಬಜೆಟ್: ಇಂಧನ, ಮದ್ಯ, ಕಾರು ದುಬಾರಿ- ಶಬರಿಮಲೆ ಮಾಸ್ಟರ್ ಪ್ಲಾನ್‌ಗೆ 30 ಕೋಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಸರಕಾರದ 2023-24 ನೇ ವರ್ಷದ ಮುಂಗಡಪತ್ರವನ್ನು ರಾಜ್ಯ ಹಣಕಾಸು ಖಾತೆ ಸಚಿವ ಕೆ.ಎನ್.ಬಾಲಗೋಪಾಲನ್ ಶುಕ್ರವಾರ ಬೆಳಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು.

1,35,419 ಕೋಟಿ ರೂ. ಆದಾಯ ಮತ್ತು 1,76,089 ಕೋಟಿ ರೂ. ವೆಚ್ಚ ಹಾಗೂ 40,670 ಕೋಟಿ ರೂ. ಕೊರತೆ ಬಜೆಟ್ ಮಂಡಿಸಲಾಯಿತು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ ಬಜೆಟ್‌ನಲ್ಲಿ 10 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಕಾಸರಗೋಡು ಚಟ್ಟಂಚಾಲ್‌ನಲ್ಲಿ ಟಾಟಾ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಅಗತ್ಯದ ಫಂಡ್ ನೀಡಲಾಗುವುದು ಎಂದು ಅವರು ಭರವಸೆಯಿತ್ತರು. ರಾಜ್ಯದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್‌ಗೆ 2 ರೂ. ಸೆಸ್ ವಿಸಲಾಗಿದ್ದು, ಈ ಮೂಲಕ ಜನತೆಗೆ ಭಾರೀ ಹೊರೆ ಬಿದ್ದಂತಾಗಿದೆ. ಅಲ್ಲದೆ ಮದ್ಯದ ಬೆಲೆಯನ್ನು ಏರಿಸಲಾಗಿದೆ.

ರಾಜ್ಯದಲ್ಲಿ ದಿನಬಳಕೆ ವಸ್ತುಗಳ ಬೆಲೆಯೇರಿಕೆಯನ್ನು ತಡೆಗಟ್ಟಲು 2,000 ಕೋಟಿ ರೂ.ಗಳನ್ನು ಮುಂಗಡಪತ್ರದಲ್ಲಿ ಮೀಸಲಿರಿಸಲಾಗಿದೆ. ಬಡವರಿಗೆ ಉಚಿತವಾಗಿ ಕನ್ನಡಕ ವಿತರಿಸಲು 50 ಕೋಟಿ ರೂ. ತೆಗೆದಿರಿಸಲಾಗುವುದು. ಕಲ್ಯಾಣ ಪಿಂಚಣಿ ಯೋಜನೆಗೆ100 ಕೋಟಿ ರೂ., ಬೆಳೆ ವಿಮೆಗೆ 30 ಕೋಟಿ ರೂ., ಭತ್ತದ ಕೃಷಿ ಅಭಿವೃದ್ಧಿಗೆ 91.05 ಕೋಟಿ ರೂ., ನಗರೀಕರಣಕ್ಕಾಗಿ 300 ಕೋಟಿ ರೂ., ಮೀನುಗಾರಿಕೆ ವಲಯ ಅಭಿವೃದ್ಧಿಗೆ 321.33 ಕೋಟಿ ರೂ., ಪ್ರವಾಸೋದ್ಯಮ ಯೋಜನೆಗೆ 50 ಕೋಟಿ ರೂ. ನಿಗದಿಪಡಿಸಲಾಗಿದೆ. ಕೃಷಿ ವಲಯಕ್ಕೆ ವಿಶೇಷ ಪರಿಗಣನೆ ನೀಡಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ 971 ಕೋಟಿ ರೂ. ತೆಗೆದಿರಿಸಲಾಗುವುದು ಎಂದು ಸಚಿವರು ಹೇಳಿದರು.

ಶಬರಿಮಲೆ ಮಾಸ್ಟರ್ ಪ್ಲಾನ್‌ಗೆ 30  ಕೋಟಿ ರೂ.:
ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ 115.02 ಕೋಟಿ ರೂ. ಹಾಗೂ ಶಬರಿಮಲೆ ಮಾಸ್ಟರ್ ಪ್ಲಾನ್‌ಗೆ 30 ಕೋಟಿ ರೂ., ನಿಲಕ್ಕಲ್ ಅಭಿವೃದ್ಧಿಗೆ 1.5 ಕೋಟಿ ರೂ., ಎರುಮೇಲಿ ಮಾಸ್ಟರ್ ಪ್ಲಾನ್‌ಗೆ ಹೆಚ್ಚುವರಿಯಾಗಿ ಇನ್ನೂ 10 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು 50 ಕೋಟಿ ರೂ., ಕುಟುಂಬಶ್ರೀಗೆ 260  ಕೋಟಿ ರೂ., ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ನಿರ್ಮಿಸಿಕೊಡುವ ಲೈಫ್ ಯೋಜನೆಯಡಿ 1,436  ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ಸ್ವಂತ ಆದಾಯ ಹೆಚ್ಚಿರುವುದಾಗಿ ಹಣಕಾಸು ಸಚಿವರು ಉಲ್ಲೇಖಿಸಿದರು. ಸ್ವಂತ ಆದಾಯವು ಈ ವರ್ಷ 85,000 ಕೋಟಿ ರೂ. ಏರಲಿದೆ ಎಂದರವರು.
ರಬ್ಬರ್ ಕೃಷಿ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗಿದೆ. ಅದರಂತೆ ಈ ಕೃಷಿ ಸಬ್ಸಿಡಿಗಾಗಿ 400 ಕೋಟಿ ರೂ. ಗಳನ್ನು ನೀಡಲಾಗುವುದು. ಮೇಕ್ ಇನ್ ಕೇರಳ ಯೋಜನೆಗೆ 100 ಕೋಟಿ ರೂ. ಮಂಜೂರು ಮಾಡಲಾಗುವುದು. ತೆಂಗಿನಕಾಯಿಗೆ ಬೆಂಬಲ ಬೆಲೆಯನ್ನು 32 ರೂ.ನಿಂದ 34 ರೂ. ಗೇರಿಸಲಾಗುವುದು. ಕಡುಬಡತನ ನಿವಾರಣೆಗೆ 80 ಕೋಟಿ ರೂ., ಇಂಧನ ವಲಯಕ್ಕೆ 1,158 ಕೋಟಿ ರೂ., ಐಟಿ ವಲಯದ ಪ್ರಗತಿಗಾಗಿ 559  ಕೋಟಿ ರೂ., ಸ್ಮಾರ್ಟ್ ಆಫ್ ಮಿಷನ್‌ಗೆ 90.52 ಕೋಟಿ ರೂ., ರಾಜ್ಯದ ಗ್ರಾಮೀಣ ವಲಯದ ಸಮಗ್ರ ಅಭಿವೃದ್ಧಿಗೆ 6294.04ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ.

ಆರೋಗ್ಯ ವಲಯದ ಸಮಗ್ರ ಅಭಿವೃದ್ಧಿಗೆ ಯೋಜನೆ:
ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 75 ಕೋಟಿ ರೂ., ಸೀನಿಯರ್ ವರ್ಕ್ ಹೋಮ್‌ಗೆ 50 ಕೋಟಿ ರೂ., ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಸ್ಕಾಲರ್ ಶಿಪ್ ನೀಡಲು 10 ಕೋಟಿ ರೂ. ತೆಗೆದಿರಿಸಲಾಗಿದೆ. ಈ ಮಧ್ಯೆ ಕೇರಳವನ್ನು ಆರೋಗ್ಯ ಹಬ್‌ನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದ್ದು, ಅದರಂತೆ ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 2,828.33 ಕೋಟಿ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ. ಎಲ್ಲಾ ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಆರಂಭಿಸಲಾಗುವುದು. ಆಯುರ್ವೇದ, ಸಿದ್ಧೌಷಧ, ಯುನಾನಿ ಚಿಕಿತ್ಸಾ ವಲಯಗಳಿಗೆ 40 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಹೋಮಿಯೋ ವಿಭಾಗಕ್ಕೆ 25 ಕೋಟಿ ರೂ. ನೀಡಲಾಗಿದೆ. ಈ ಮೂಲಕ ಕೇರಳದ ಆರೋಗ್ಯ ರಂಗವನ್ನು ಮೂಲಭೂತವಾಗಿ ಪ್ರಗತಿಯತ್ತ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವರು ತಿಳಿಸಿದರು.

ಕೆಎಸ್‌ಆರ್‌ಟಿಸಿ ವಿಭಾಗದ ಪ್ರಗತಿಗೆ ಮೊತ್ತ ಮೀಸಲು:
ಕೆಎಸ್‌ಆರ್‌ಟಿಸಿ ವಿಭಾಗದ ಸಮಗ್ರ ಅಭಿವೃದ್ಧಿಗೆ 131 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಈ ಮೂಲಕ ಕೆಎಸ್‌ಆರ್‌ಟಿಸಿ ವಲಯವನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರತರಲು ಪ್ರಯತ್ನ ನಡೆಯಲಿದೆ. ಕಾರುಣ್ಯ ಮಿಷನ್‌ಗೆ 574.5 ಕೋಟಿ ರೂ., ಪರಿಶಿಷ್ಟ ವಲಯದ ಅಭಿವೃದ್ಧಿ ಇಲಾಖೆಗೆ 1,638.1 ಕೋಟಿ ರೂ., ಅಂಬೇಡ್ಕರ್ ಗ್ರಾಮೀಣ ವಲಯದ ಅಭಿವೃದ್ಧಿಗೆ 50 ಕೋಟಿ ರೂ., ಸಾಂಕ್ರಾಮಿಕ ರೋಗ ತಡೆಗಟ್ಟಲು 11 ಕೋಟಿ ರೂ., ಸುರಕ್ಷಿತ ಆಹಾರ ವಿತರಣೆ ಖಾತರಿಪಡಿಸಲು 7 ಕೋಟಿ ರೂ., ಇ ಹೆಲ್ತ್‌ಗೆ 30ಕೋಟಿ ರೂ., ಆರೋಗ್ಯರಂಗದ ಶಿಕ್ಷಣ ವಲಯಕ್ಕೆ 4,623.75 ಕೋಟಿ ರೂ., ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ 183.14 ಕೋಟಿ ರೂ., ಶಿಕ್ಷಣ ವಲಯಕ್ಕೆ 1,73.01 ಕೋಟಿ ರೂ. ಹಾಗೂ ಮಧ್ಯಾಹ್ನದೂಟ ವಿತರಣಾ ಯೋಜನೆಗಾಗಿ 344.64 ಕೋಟಿ ರೂ.ಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳ ಉಚಿತ ಸಮವಸ್ತ್ರ ವಿತರಣೆಗಾಗಿ 140 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ಹಣಕಾಸು ಸಚಿವರು ವಿವರಿಸಿದರು.

ಕಾಸರಗೋಡು, ವಯನಾಡು, ಇಡುಕ್ಕಿ, ಪತ್ತನಂತ್ತಿಟ್ಟ ಜಿಲ್ಲೆಗಳಲ್ಲಿ ನೂತನ ಕರಿಯರ್ ಡೆವಲಪ್‌ಮೆಂಟ್ ಸೆಂಟರ್‌ಗಳನ್ನು ಮಂಜೂರು ಗೊಳಿಸಲಾಗಿದೆ. ಕಣ್ಣೂರು ಪೋಸ್ಟ್ ಗ್ರಾಜ್ಯುವಿಟಿ ಆಂಡ್ ರಿಸರ್ಚ್ ಸೆಂಟರ್ ಇನ್ ಫಯರ್ ಆಂಡ್ ಸೇಫ್ಟಿ ಸಯನ್ಸ್‌ನ ಪ್ರಾಥಮಿಕ ಚಟುವಟಿಕೆಗೆ ಒಂದು ಕೋಟಿ ರೂ., ಪರಿಶಿಷ್ಟ ಜಾತಿ ವಿಭಾಗದ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟಕ್ಕೆ 429.61 ಕೋಟಿ ರೂ., ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ನೈಪುಣ್ಯ ವಿಕಸನಕ್ಕೆ 10 ಕೋಟಿ ರೂ., ಇತರ ಹಿಂದುಳಿದ ವಿಭಾಗಗಳ ಶಿಕ್ಷಣ ಯೋಜನೆಗಳಿಗಾಗಿ 45 ಕೋಟಿ ರೂ., ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಯೋಜನೆಗಳಿಗಾಗಿ 15 ಕೋಟಿ ರೂ., ಕೊಚ್ಚಿ ಕ್ಯಾನ್ಸರ್ ಸೆಂಟರ್‌ನ್ನು ಅಭಿವೃದ್ಧಿಪಡಿಸಲಾಗುವುದು. ನೂತನವಾಗಿ 20 ನರ್ಸಿಂಗ್ ಕಾಲೇಜುಗಳ ನಿರ್ಮಾಣಕ್ಕಾಗಿ 20 ಕೋಟಿ ರೂ.ಗಳನ್ನು ಮೀಸಲಿರಿಸಲು ಮುಂಗಡಪತ್ರದಲ್ಲಿ ತೀರ್ಮಾನಿಸಲಾಗಿದೆ.

ಕೇರಳ ಬಜೆಟ್‌ನಲ್ಲಿ ಇಂಧನ, ಮದ್ಯ, ಕಾರು ಬೆಲೆ ಏರಿಕೆ:
ಕೇರಳದಲ್ಲಿ ಇಂಧನ ಬೆಲೆ, ಮದ್ಯದ ಬೆಲೆ, ವಾಹನ ತೆರಿಗೆ ಮತ್ತು ವಿದ್ಯುತ್ ಸುಂಕ ಹೆಚ್ಚಳ ಸೇರಿದಂತೆ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಅವರು ಮುಂಗಡಪತ್ರದಲ್ಲಿ ರಾಜ್ಯದ ಜನತೆಗೆ ಹಲವು ಕಹಿಗಳನ್ನು ನೀಡಿದರು. ರಾಜ್ಯದಲ್ಲಿ ಇಂಧನ, ಕಾರು, ಮದ್ಯದ ಬೆಲೆ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 2 ರೂಪಾಯಿಗಳ ಸಾಮಾಜಿಕ ಭದ್ರತಾ ಸೆಸ್‌ನ್ನು ವಿಸಲಾಗಿದೆ ಎಂದು ಸಚಿವರು ಘೋಷಿಸಿದರು. 500 ರಿಂದ 999 ರೂ. ಬೆಲೆಯ ಭಾರತೀಯ ನಿರ್ಮಿತ ವಿದೇಶಿ ಮದ್ಯದ ಮೇಲೆ ಪ್ರತೀ ಬಾಟಲಿಗೆ 20 ರೂ. ಮತ್ತು 1000 ರೂ. ಗಿಂತ ಹೆಚ್ಚಿನ ಬೆಲೆಯ ಮದ್ಯದ ಮೇಲೆ 40 ರೂ. ಸಾಮಾಜಿಕ ಭದ್ರತಾ ಸೆಸ್ ವಿಸಲಾಗಿದೆ. ಈ ಮೂಲಕ ಹೆಚ್ಚುವರಿ 400 ಕೋಟಿ ರೂ.ಗಳನ್ನು ನಿರೀಕ್ಷಿಸಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ. ಕೇರಳವನ್ನು ವ್ಯಾಪಾರ ಮೇಳ ರಾಜ್ಯವನ್ನಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ನುಡಿದರು.

ರಾಜ್ಯದಲ್ಲಿ ಇನ್ನು ಮುಂದೆ ಇವುಗಳು ದುಬಾರಿ:
೧. ಅರ್ಜಿ ಶುಲ್ಕ ಮತ್ತು ಪರವಾನಗಿ ಶುಲ್ಕವನ್ನು ಹೆಚ್ಚಿಸಲಾಗಿದೆ
೨. ಅಡಮಾನ್‌ಗಳಿಗೆ 100 ರೂ. ದರದಲ್ಲಿ ಸರ್ಚಾರ್ಜ್
೩. ಇಲೆಕ್ಟ್ರಿಕ್ ವಾಹನಗಳನ್ನು ಹೊರತುಪಡಿಸಿ ಇತರ ಎಲ್ಲಾ ವಾಹನಗಳ ಬೆಲೆಗಳು ಹೆಚ್ಚಾಗಲಿವೆ
೪. ಮದ್ಯವು ದುಬಾರಿಯಾಗಲಿದ್ದು , ಸಾಮಾಜಿಕ ಭದ್ರತಾ ನಿಗಾಗಿ ಮದ್ಯದ ಮೇಲಿನ ಸೆಸ್‌ನ್ನು ಪರಿಷ್ಕರಿಸಲಾಗುವುದು
೫. ಪೆಟ್ರೋಲ್ ಮತ್ತು ಡೀಸೆಲ್‌ಗಳ ದರ ಏರಿಕೆಯಾಗಲಿದ್ದು, ಪ್ರತೀ ಲೀಟರ್‌ಗೆ 2 ರೂ.ನಂತೆ ಬೆಲೆ ಹೆಚ್ಚಾಗಲಿವೆ
೬. ನ್ಯಾಯಾಲಯದ ಶುಲ್ಕವನ್ನು ಏರಿಸಲಾಗಿದೆ
೭. ಇನ್ನು ಮುಂದೆ ಕೇರಳದಲ್ಲಿ ಮನೆ ಕಟ್ಟಲು ಹೆಚ್ಚು ಖರ್ಚಾಗಲಿದ್ದು, ಭೂಮಿ ಖರೀದಿಸಲು ಹೆಚ್ಚು ವೆಚ್ಚವಾಗಲಿದೆ
೮. ಸರಕಾರವು ಸೇವಾ ಶುಲ್ಕವನ್ನು ಹೆಚ್ಚಿಸಿದೆ
೯. ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ವಿದ್ಯುತ್ ದರವನ್ನು ಹೆಚ್ಚಿಸಲಾಗುವುದು
೧೦. ಖಾಲಿ ಮನೆಗಳ ಮೇಲೆ ವಿಶೇಷ ತೆರಿಗೆ
೧೧. ಬಹು ಮನೆ ಮಾಲೀಕರಿಗೆ ಎರಡನೇ ಮನೆಯ ಮೇಲೆ ಪ್ರತ್ಯೇಕ ತೆರಿಗೆ
೧೨. ಗಣಿಗಾರಿಕೆ ಮತ್ತು ಭೂವಿಜ್ಞಾನದ ರಾಯಲ್ಟಿ ಮೊತ್ತ ಹೆಚ್ಚಿಸಲಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!