ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ಎಣ್ಣೆ ಕ್ಲೀನ್ ಮಾಡೋದಕ್ಕಾಗಿ ಕೆಮಿಕಲ್ ಬಳಕೆ ಮಾಡಿದ ಕೆಎಫ್‌ಸಿ ದೇವನಹಳ್ಳಿಯ ಔಟ್‌ಲೆಟ್‌ನ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆ.
ವಾರಾತ್ಯಂದಲ್ಲಿ ಅತಿ ಹೆಚ್ಚು ಜನರನ್ನು ಹೊಂದಿರುವ ಕೆಎಫ್‌ಸಿ ತನ್ನ ಫ್ರೈಡ್ ಚಿಕನ್ ರುಚಿಯಿಂದ ಹೆಸರು ಮಾಡಿದೆ. ಇತ್ತೀಚೆಗೆ ಮಳಿಗೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ಆರೋಗ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕೆಎಫ್‌ಸಿಯಲ್ಲಿ ಮಾರಾಟವಾಗುವ ಫ್ರೈಡ್ ಚಿಕನ್ ಸೇರಿದಂತೆ ವಿವಿಧ ವಸ್ತುಗಳ ಮಾದರಿಗಳನ್ನು ಪರೀಕ್ಷೆಗೆ ರವಾನಿಸಿದ್ದರು. ಆಹಾರ ತಯಾರಿಕೆಯಲ್ಲಿ ಬಳಸಲಾಗಿರುವ ಎಣ್ಣೆಯಲ್ಲಿ ರಾಸಾಯನಿಕ ಇರುವುದು ಪತ್ತೆಯಾಗಿದೆ. ಎಣ್ಣೆಯಲ್ಲಿ ‘ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್’ ಇರುವುದು ಪತ್ತೆಯಾಗಿದೆ.
ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅನ್ನು ಕೈಗಾರಿಕಾ ಕ್ಷೇತ್ರದಲ್ಲಿನ ಸೆರಾಮಿಕ್ಸ್, ರಬ್ಬರ್ ಮತ್ತು ಪೇಂಟ್‌ಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಸೌಂದರ್ಯವರ್ಧಕಗಳು ಮತ್ತು ಫಾರ್ಮಾಸ್ಯುಟಿಕಲ್‌ಗಳಲ್ಲಿ ಆಂಟಿ-ಕೇಕಿಂಗ್ ಏಜೆಂಟ್ ಆಗಿಯೂ ಬಳಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ಆಹಾರದಲ್ಲಿ ಬಳಕೆ ಮಾಡುವುದು ಹಾನಿಕಾರಕ. ಇದನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದಲ್ಲದೆ ತಪಾಸಣೆಯ ವೇಳೆ ಕೆಎಫ್‌ಸಿ ದೇವನಹಳ್ಳಿ ಶಾಖೆಯಲ್ಲೂ ಅನೈರ್ಮಲ್ಯ ಕಂಡು ಬಂದಿದೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ ದೃಢವಾಗಿದ್ದು, ಅಡುಗೆ ಎಣ್ಣೆಯನ್ನು ಹಲವು ಬಾರಿ ಮರುಬಳಕೆ ಮಾಡಿರುವುದನ್ನು ರೆಸ್ಟೋರೆಂಟ್ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಇದೀಗ ಮಳಿಗೆಯ ಪರವಾನಗಿಯನ್ನು 14 ದಿನಗಳ ಕಾಲ ಅಮಾನತುಗೊಳಿಸಲಾಗಿದೆ. ಕೆಎಫ್‌ಸಿ ಮಳಿಗೆಯ ಜೊತೆಗೆ ಇತರೆ ಮಳಿಗೆಗಳ ಪರವಾನಗಿಯನ್ನೂ ಅಮಾನತುಗೊಳಿಸಲಾಗಿದೆ.