ಪಾಕಿಗಳ ಎದೆ ನಡುಗಿಸಿದ್ದ ಎಂಟೆದೆ ಶೂರರ ಯಶೋಗಾಥೆಯನ್ನು ಮಕ್ಕಳಿಗೆ ತಿಳಿಸುತ್ತಿದೆ ʼಖಡಕ್‌ʼ ತಂಡ

– ವಿಜಯಕುಮಾರ ಬೆಳ್ಳೇರಿಮಠ, ಹುಬ್ಬಳ್ಳಿ
ಕಾರ್ಗಿಲ್ ವಿಜಯ ದಿವಸ್ ಒಂದು ದಿನಕ್ಕೆ ಸೀಮಿತವಾಗಬಾರದು. ವೀರ ಹುತಾತ್ಮ ಯೋಧರನ್ನು ಪ್ರತಿ ನಿತ್ಯ ಸ್ಮರಿಸುವಂತಾಗಬೇಕು. ಈ ಉದ್ದೇಶದಿಂದ ಹುತಾತ್ಮ ಯೋಧರ ಜೀವನ ಯಶೋಗಾಥೆಯನ್ನು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವನ್ನು ನಗರದ ʼಖಡಕ್ ವಿಚಾರʼ ಯುವಕರ ತಂಡವು ಮಾಡುತ್ತಿದೆ.
ಈ ತಂಡ ಅಪರೇಷನ್ ವಿಜಯ ವೀರಯೋಧರ ವೀರ ಚರಿತ್ರೆ ಅಭಿಯಾನ ಆರಂಭಿಸಿದೆ. ಕಾರ್ತಿಕ ರಾಯ್ಕರ್, ಪ್ರಮೋದ ಕುಂದಗೋಳ ಮತ್ತು ತೌಸಿಫ್ ಮುಲ್ಲಾ ಎಂಬುವರು ತಂಡದಲ್ಲಿದ್ದಾರೆ.
ಉತ್ತರ ಕರ್ನಾಟಕ 200ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧದ ಹಿನ್ನೆಲೆ, ಯುದ್ಧದಲ್ಲಿ ಹುತಾತ್ಮ ಯೋಧರ ಯಶೋಗಾಥೆ ಸೇರಿದಂತೆ ವಿವಿಧ ದೇಶ ಭಕ್ತಿ ವಿಚಾರಗಳನ್ನು ತಿಳಿಸುತ್ತಿದ್ದಾರೆ.
ಪ್ರಾತ್ಯಕ್ಷಿಕೆ ಮೂಲಕ ಯುದ್ಧದ ಕಲ್ಪನೆ:
ಯುವಕರ ತಂಡ ಸ್ವಂತ ಹಣ ಖರ್ಚು ಮಾಡಿ ಯುದ್ಧದ ಕಲ್ಪನೆ ಮೂಡಿಸುವ ಪ್ರಾತ್ಯಕ್ಷಿಕೆ ತಯಾರಿಸಿದ್ದಾರೆ. ಅವಕಾಶ ನೀಡಿದ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಯುದ್ಧದ ಸನ್ನಿವೇಶಗಳನ್ನು ವಿವರಿಸುತ್ತಾರೆ. ಇದು ನೋಡುಗರನ್ನು ಯುದ್ಧ ಭೂಮಿಗೆ ಕರೆದೊಯ್ಯುತ್ತದೆ. ಅಷ್ಟೇ ಅಲ್ಲದೆ ಹುತಾತ್ಮ ಯೋಧರ ಭಾವಚಿತ್ರಗಳು, ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.
ಹುತಾತ್ಮ ಯೋಧರ ಯಶೋಗಾಥೆ:
ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ ಕ್ಯಾಪ್ಟನ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಕ್ಯಾಪ್ಟನ್ ಮನೋಜ ಮುಮಾರ ಪಾಂಡೆ, ಮೇಜರ್ ರಾಜೇಶ್ ಅಕಾರಿ, ಮೇಜರ್ ವಿವೇಕ್ ಗುಪ್ತಾ, ಗ್ರೇನೆಡಿಯರ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಸೇರಿದಂತೆ ೩೦ಕ್ಕೂ ಹೆಚ್ಚು ಯೋಧರ ಜೀವನ ಚರಿತ್ರೆ ತಿಳಿಸುತ್ತಿದ್ದಾರೆ.
ಸ್ವಾತಂತ್ರ್ಯ ಅಮೃತ್ ಮಹೋತ್ಸವಕ್ಕೆ ಈ ಅಭಿಯಾನ:
ಕೇಂದ್ರ ಸರ್ಕಾರ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮಾಡುತ್ತಿದೆ. ಇದಕ್ಕೆ ನಮ್ಮದು ಸಹ ಸಣ್ಣ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತವಾಗಿ ಪಠ್ಯಪುಸ್ತಕಕ್ಕೆ ಸೀಮಿತವಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವೀರಯೋಧರ ಚರಿತ್ರೆ ಮತ್ತು ವೀರ ಯೋಧರ ಹೆತ್ತವರ ಕತೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುವ ಕಾರ್ಯವನ್ನು ಮಾಡಲು ಸಜ್ಜಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಇಂತಹ ಕಥೆ ಕೇಳುವುದರಿಂದ ವಿದ್ಯಾರ್ಥಿಗಳಿಗೆ ದೇಶ ಭಕ್ತಿ ಮತ್ತು ಗುರಿ ಸಾಧನೆಗೆ ಪ್ರೇರಣಾದಾಯಕವಾಗಿದೆ ಎಂದು ಖಡಕ್ ವಿಚಾರ ತಂಡ ಕಾರ್ತಿಕ ರಾಯ್ಕರ್ ತಿಳಿಸಿದರು.
ಇಂತಹದ್ದೊಂದು ಪರಿಕಲ್ಪನೆ ಹುಟ್ಟಿದ್ದು ಹೇಗೆ?:
ಕೊರೋನಾ ವೇಳೆಯಲ್ಲಿ ಈ ವಿಚಾರ ಬಂದಿತ್ತು. ನಮ್ಮ ತಂದೆಗೆ ನಾನು ವೀರಯೋಧರ ಕಥೆಯನ್ನು ಪ್ರತಿಯೊಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸಲಿ ಎಂಬ ಮಹದಾಸೆಯಿತ್ತು. 2 ವರ್ಷದ ಹಿಂದೆ ಅಪ್ಪನನ್ನು ಕಳೆದುಕೊಳ್ಳುವ ಮುನ್ನ ಮಾತುಕೊಟ್ಟಿದ್ದೆ. ಆದ್ದರಿಂದ ಈ ಕನಸನ್ನು ನನಸು ಮಾಡಬೇಕೆಂಬ ಹಾದಿಯಲ್ಲಿ ನನ್ನ ತಂಡದೊಂದಿಗೆ ಮುನ್ನುಗ್ಗಿದ್ದೇನೆ ಎಂಬುದು ಕಾರ್ತಿಕ್‌ ಮನದಾಳದ ಮಾತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!