ಹೊಸದಿಗಂತ ವರದಿ, ಅಂಕೋಲಾ:
ಸಹಾಯ ಮಾಡುವ ನೆಪದಲ್ಲಿ ಎ.ಟಿ.ಎಂ ಕಾರ್ಡ್ ಬದಲಾಯಿಸಿ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸಿದ ಘಟನೆ ಪಟ್ಟಣದ ಕೆ.ಸಿ.ರಸ್ತೆಯಲ್ಲಿರುವ ಎಸ್. ಬಿ.ಐ ಎ.ಟಿ.ಎಂ ನಲ್ಲಿ ನಡೆದಿದೆ.
ತಾಲೂಕಿನ ಹಟ್ಟಿಕೇರಿ ನಿವಾಸಿ ಸುರೇಖಾ ಸುಧೀರ ನಾಯ್ಕ (50) ಎನ್ನುವವರು ಅಕ್ಟೋಬರ್ 22 ರಂದು ತನ್ನ ಮಾವನ ಮಗ ಕೇಣಿ ನಿವಾಸಿ ರಾಜು ನಾರಾಯಣ ನಾಯ್ಕ ಎನ್ನುವವರ ಜೊತೆಯಲ್ಲಿ ಬಂದು ತಮ್ಮ ಕಾರ್ಡನ್ನು ಬಳಸಿ ಹಣ ತೆಗೆದಿದ್ದು ಅಲ್ಲಿ ನಿಂತಿದ್ದ ವ್ಯಕ್ತಿ ಪಾಸ್ ಬುಕ್ ಎಂಟ್ರಿ ಮಾಡಿಕೊಡುವ ನೆಪದಲ್ಲಿ ಎ.ಟಿ.ಎಂ ಕಾರ್ಡ್ ಬದಲಾಯಿಸಿರುವುದಾಗಿ ತಿಳಿದು ಬಂದಿದೆ.
ಅಕ್ಟೋಬರ್ 23 ರಂದು ಪುನಃ ಬ್ಯಾಂಕಿಗೆ ಬಂದು ಚೆಕ್ ಮೂಲಕ ಹಣ ಪಡೆಯಲು ಹೋದಾಗ ಬ್ಯಾಂಕ್ ಸಿಬ್ಬಂದಿ ಖಾತೆಯಲ್ಲಿ ಹಣ ಇಲ್ಲ ಎಂದು ತಿಳಿಸಿದ್ದು ಎ.ಟಿ.ಎಂ ಕಾರ್ಡ್ ಬಳಸಿ 40 ಸಾವಿರ ರೂಪಾಯಿ ಹಣ ತೆಗೆದಿರುವ ಕುರಿತು ತಿಳಿದು ಬಂದಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.