ಹೊಸ ದಿಗಂತ ವರದಿ, ಮಂಡ್ಯ :
ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇರುವ ಭೂಮಿಯನ್ನು ಮಾರಾಟ ಮಾಡಿ ಸಾಲ ತೀರಿಸಲೆಂದು ಹಣವನ್ನು ಕಾರಿನಲ್ಲಿಟ್ಟು ಬ್ಯಾಂಕಿಗೆ ಹೋದ ವೇಳೆ ಖತರ್‌ನಾಕ್ ಕಳ್ಳರು ಕಾರಿನ ಗಾಜನ್ನು ಒಡೆದು ಹಣ ಎಗರಿಸಿರುವ ವಿಲಕ್ಷಣ ಪ್ರಸಂಗವೊಂದು ನಗರದಲ್ಲಿ ಹಾಡಹಗಲೇ ನಡೆದಿದೆ.
ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ ಪರಮೇಶ್ ಎಂಬುವರೇ ಹಣ ಕಳೆದುಕೊಂಡು ಗೋಳಾಡಿದ ವ್ಯಕ್ತಿ.
ನಡೆದಿದ್ದಿಷ್ಟು :
ಸಾಲಗಾರರಿಗೆ ಹಣ ನೀಡಲು ಇರುವ ಭೂಮಿಯಲ್ಲಿ ಒಂದಷ್ಟು ಭಾಗವನ್ನು ಮಾರಾಟ ಮಾಡಿ ಮಂಡ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಅದರಿಂದ ಬಂದ ಹಣವನ್ನು ಕಾರಿನಲ್ಲಿ ಇಟ್ಟುಕೊಂಡು ಪರಮೇಶ್ ಅವರು ನಗರಸಭೆ ಆವರಣಕ್ಕೆ ಬಂದಿದ್ದರು.
ನಗರಸಭೆಯಲ್ಲಿ ಸಣ್ಣ ಕೆಲಸ ಮುಗಿಸಿಕೊಂಡು ವಾಪಸ್ಸು ಹೋಗುವ ಮುನ್ನ ಕಾರ‌್ಯನಿಮಿತ್ತ ಸಮೀಪದಲ್ಲಿದ್ದ ಎಸ್‌ಬಿಐಗೆ ಹೋಗಿದ್ದಾರೆ.
ಕೆಲಸ ಮುಗಿಸಿಕೊಂಡು ವಾಪಸ್ಸು ಕಾರಿನ ಬಳಿ ಬಂದಾಗ ಪರಮೇಶ್‌ಗೆ ಶಾಕ್ ಆಗಿತ್ತು. ಕಾರಿನ ಗಾಜನ್ನು ಒಡೆದ ದುಷ್ಕರ್ಮಿಗಳು ಕಾರಿನಲ್ಲಿದ್ದ 4.5 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದರು. ಇದರಿಂದ ಆತಂಕಗೊಂಡ ಪರಮೇಶ್ ಸ್ಥಳದಲ್ಲೇ ಗೋಳಾಡತೊಡಗಿದರು.
ಈ ದೃಶ್ಯ ಕಂಡ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಈ ಬಗ್ಗೆ ಮಾಹಿತಿ ಪಡೆದು ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ವೀಕ್ಷಿಸಿದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದ 4.50 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಉಪ ನೋಂದಣಿ ಕಚೇರಿ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.