ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಸ್ಮಾನ್ ಖವಾಜ ಹಾಗೂ ಕ್ಯಾಮರೋನ್ ಗ್ರೀನ್ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ರವಿಚಂದ್ರನ್ ಅಶ್ವಿನ್ 91 ರನ್ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಎರಡನೇ ದಿನದಾಟದ ಚಹಾ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 409 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಚಹಾ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಅಕ್ಷರ್ ಪಟೇಲ್, ಉಸ್ಮಾನ್ ಖವಾಜ ಅವರ ಬಲಿ ಪಡೆಯುವಲ್ಲಿ ಯಶಸ್ವಿಯಾದರು. 180 ರನ್ ಬಾರಿಸಿ ದ್ವಿಶತಕದತ್ತ ದಾಪುಗಾಲಿಡುತ್ತಿದ್ದ ಉಸ್ಮಾನ್ ಖವಾಜ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾದರು.
409 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಾಗ 9ನೇ ವಿಕೆಟ್‌ಗೆ ಜತೆಯಾಟ ಟೋಡ್ ಮರ್ಫಿ ಹಾಗೂ ನೇಥನ್ ಲಯನ್ ಜೋಡಿ 116 ಎಸೆತಗಳನ್ನು ಎದುರಿಸಿ 70 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 475ರ ಗಡಿ ದಾಟಿಸಿದರು. ಟೋಡ್ ಮರ್ಫಿ 61 ಎಸೆತಗಳನ್ನು ಎದುರಿಸಿ 41 ರನ್ ಗಳಿಸಿ ಅಶ್ವಿನ್‌ಗೆ 5ನೇ ಬಲಿಯಾದರು.
ಅಶ್ವಿನ್ ಮರ್ಫಿ ವಿಕೆಟ್ ಕಬಳಿಸುವ ಮೂಲಕ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 112 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್‌ನಲ್ಲಿ 32ನೇ ಬಾರಿಗೆ 5+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.