ಅವನು ಬ್ರಿಟೀಷ್‌ ಸರ್ಕಾರದ ದೊಡ್ಡ ಅಧಿಕಾರಿಯಾಗುತ್ತಾನೆಂದು ಎಲ್ಲರೂ ಹೇಳುತ್ತಿದ್ದರು.. ಆದರೆ ಆತ ಬ್ರಿಟೀಷರಿಗೆ ಸಿಂಹಸ್ವಪ್ನನಾಗಿಬಿಟ್ಟ..

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಖಿರೋದ್ರಂಜನ್ ಬಂಡೋಪಾಧ್ಯಾಯ (1912-1948) ಅವಿಭಜಿತ ಬಂಗಾಳ ರಾಜ್ಯದ ಬಾರಿಶಾಲ್ ಜಿಲ್ಲೆಯ ಕಾಶಿಪೋರ್ ಗ್ರಾಮದ ಚಿಂತಾಹರನ್ ಬಂಡೋಪಾಧ್ಯಾಯ ಅವರ ಮಗ. ಅವರ ತಂದೆ ಚಟ್ಟಗ್ರಾಮ್‌ನಲ್ಲಿ ರೈಲ್ವೆ ಇಲಾಖೆಯ ಹುದ್ದೆಯಲ್ಲಿದ್ದರು. ಖಿರೋದ್ರಂಜನ್ ಶಾಲಾಹಂತದಲ್ಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಮೊದಲ ಪ್ರಯತ್ನದಲ್ಲೇ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನೂ ಉತ್ತೀರ್ಣನಾಗಿದ್ದ. ಆ ಬಳಿಕ ಆತ ಚಟ್ಟಗ್ರಾಮದಲ್ಲಿ ಕಾಲೇಜಿಗೆ ಸೇರಿದ. ಆತ ಭವಿಷ್ಯದಲ್ಲಿ ಬ್ರಿಟೀಷ್‌ ಸರ್ಕಾರದಲ್ಲಿ ದೊಡ್ಡ ಹುದ್ದೆಗೆ ಏರುತ್ತಾನೆ ಎಂದು ಎಲ್ಲರೂ ಊಹಿಸಿದ್ದರು. ಆದರೆ.. ಖಿರೋದ್ರಂಜನ್ ವಿಚಾರದಲ್ಲಿ ವಿಧಿ ನಿರ್ಣಯವೇ ಬೇರೆಯದ್ದಾಗಿತ್ತು. ಎಲ್ಲರೂ ಅಂದುಕೊಂಡಂತೆ ಆತ ದೊಡ್ಡ ಅಧಿಕಾರಿಯಂತೂ ಆಗಲಿಲ್ಲ. ಬದಲಾಗಿ ಇಡೀ ಭಾರತಖಂಡ ತನ್ನ ಇತಿಹಾಸದುದ್ದಕ್ಕೂ ನೆನಪಿಡುವ ವ್ಯಕ್ತಿಯಾಗಿ ಆತ ಬೆಳೆದ.
ಸ್ವಾತಂತ್ರ್ಯ ಸೇನಾನಿ ಸೂರ್ಯ ಸೇನ್ ದೇಶಕ್ಕಾಗಿ ಪ್ರಾಣವನ್ನೂ ಅರ್ಪಿಸಲು ಸಿದ್ಧರಿರುವ ಯುವಕರನ್ನು ಹುಡುಕುತ್ತಿದ್ದರು. ಕಾಲೇಜು ಹುಡುಗ ಖಿರೋದ್ರಂಜನ್ ಅವರ ಕಣ್ಣಿಗೆ ಬಿದ್ದ. ಆದರೆ ಅಲ್ಲಿಂದಾಚೆಗೆ ಆತ ತನ್ನ ಹಿಂದಿನ ಬದುಕಿನ ಬಗ್ಗೆ ಹಿಂತಿರುಗಿ ನೋಡಲಿಲ್ಲ. ಬ್ರಿಟೀಷರನ್ನು ದೇಶದಿಂದ ಅಟ್ಟುವುದೇ ಆತನ ಬದುಕಿನ ಏಕೈಕ ಧ್ಯೇಯವಾಗಿತ್ತು. ಕತ್ತಲಿನ ರಾತ್ರಿಗಳಲ್ಲಿ ಬೆಟ್ಟದ ತಪ್ಪಲಿನಲ್ಲಿ ರೈಫಲ್ ಹಿಡಿದು ಸತತವಾಗಿ ಅಭ್ಯಾಸ ನಡೆಸಿದ. ಖಿರೋದ್ರಂಜನ್ ಕಾಯುತ್ತಿದ್ದ ದಿನ ಕಡೆಗೂ ಬಂತು. 18 ಏಪ್ರಿಲ್ 1930 ರಂದು( ಈ ದಂಗೆಯ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ವಿವರಣೆ ನೀಡಿದ್ದೇವೆ) ಬಂಗಾಳದ ಚಟ್ಟಗ್ರಾಮ್ ಗ್ರಾಮದಲ್ಲಿ ಬ್ರಟೀಷರ ವಿರುದ್ಧ ದೊಡ್ಡ ದಂಗೆ ಆರಂಭವಾಯಿತು. ಖಿರೋದ್ರಂಜನ್ ಬ್ರಿಟೀಷ್‌ ಅಧಿಕಾರಿಗಳ ವಿರುದ್ಧ ನಡೆದಿದ್ದ ಶಸ್ತ್ರಾಸ್ತ್ರ ದಾಳಿಯಲ್ಲಿ ಮುಂಚೂಣಿಯಲ್ಲಿದ್ದ. ಮೂರು ದಿನಗಳ ಕಾಲ ಬಂಗಾಳ ಬ್ರಿಟೀಷರ ಕೈಬಿಟ್ಟಿತ್ತು. ನಾಲ್ಕು ದಿನಗಳ ನಂತರ ಜಲಾಲಾಬಾದ್ ನಲ್ಲಿ ಘೋರ ಯುದ್ಧ ನಡೆಯಿತು. ಅಲ್ಲಿ ಆತನ ಅನೇಕ ಸ್ನೇಹಿತರು ತಮ್ಮ ಪ್ರಾಣವನ್ನು ತ್ಯಜಿಸಿದರು. ಆದರೆ ಖಿರೋದ್ರಂಜನ್ ಬ್ರಟೀಷರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ.
ಈ ದಂಗೆ ಬಳಿಕ 7 ವರ್ಷಗಳ ಕಾಲ ಖಿರೋದ್ರಂಜನ್ ಬ್ರೀಟೀಷ್ ಸರ್ಕಾರದ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ. ಆತ ತನ್ನನ್ನು ಉಳಿಸಿಕೊಳ್ಳಲು ಬೋಟ್‌ಮ್ಯಾನ್, ಕಾರ್ಮಿಕ ಮತ್ತು ಶಿಕ್ಷಕನಾಗಿ ಹೀಗೆ ವಿವಿಧ ವೇಷಗಳಲ್ಲಿ ಸೇವೆ ಸಲ್ಲಿಸುತ್ತಾ ಭೂಗತನಾಗಿ ವಾಸಿಸುತ್ತಿದ್ದ. ಆತನನ್ನು ಬಂಧಿಸಲು ವಿಫಲವಾದ ಪೊಲೀಸರು ಆತನ ತಂದೆಯ ಮೇಲೆ ಸೇಡು ತೀರಿಸಿಕೊಂಡರು. ಅವರನ್ನು ಸೇವೆಯಿಂದ ನಿವೃತ್ತಿ ಪಡೆಯುವಂತೆ ಒತ್ತಾಯಿಸಿದರು. ಆ ಬಳಿಕ ರೈಲ್ವೆ ಉದ್ಯೋಗಿ ಮತ್ತು ಕುಟುಂಬದ ಏಕೈಕ ದುಡಿಮೆ ಮಾಡುತ್ತಿದ್ದ ವ್ಯಕ್ತಿಯಾಗಿದ್ದ ಖಿರೋದ್ರಂಜನ್ ಅವರ ಹಿಹಿರಿಯ ಸಹೋದರ ಪ್ರಮೋದರಂಜನ್ ರನ್ನೂ ಸೇವೆಯಿಂದ ವಜಾಗೊಳಿಸಲಾಯಿತು. ಕೊನೆಗೆ 1938ರಲ್ಲಿ ಕ್ಯಾನಿಂಗ್‌ನಲ್ಲಿ ಖಿರೋದ್ರಂಜನ್ ನ್ನು ಬಂಧಿಸಲಾಯಿತು. ಅವರಿಗೆ ಮೂರೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು.
ಈ ಕಠಿಣ ಶಿಕ್ಷೆಯು ಅವರ ಆರೋಗ್ಯವನ್ನು ಕಸಿದುಕೊಂಡಿತು. ಬಿಡುಗಡೆಯ ವೇಳೆಗೆ ತೀರಾ ಕೃಶರಾಗಿ ಅನಾರೋಗ್ಯ ಪೀಡಿತರಾಗಿದ್ದ ಖಿರೋದ್ರಂಜನ್‌ ಮತ್ತೆ ಕುಟುಂಬ ಜೀವನವನ್ನು ಪ್ರವೇಶಿಸುತ್ತಿದ್ದಂತೆ ಆರೋಗ್ಯವು ಮತ್ತಷ್ಟು ಹದಗೆಟ್ಟಿತು. 1948ರ ಮಾರ್ಚ್ 20 ರಂದು ಕ್ಷಯರೋಗದಿಂದ ಭಾರತದ ಅಪ್ರತಿಮ ಹೋರಾಟಗಾರ ಖಿರೋದ್ರಂಜನ್‌ ಪಂಚಭೂತಗಳಲ್ಲಿ ಲೀನವಾದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!