ಹೊಸದಿಗಂತ ವರದಿ ಬಳ್ಳಾರಿ:
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಕ್ಕೋಡಿಯ ಹಿರೇಕುಡಿ ನಂದಿ ಪರ್ವತ ಆಶ್ರಮದ ಜೈನ ಮುನಿಯ ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ರಾಜ್ಯದಲ್ಲಿ ಇಂತಹ ಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಒಕ್ಕೂಟದ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್ ರಾವ್ ಅವರು ಮಾತನಾಡಿ, ಹಿರೇಕುಡಿ ನಂದಿ ಪರ್ವತ ಆಶ್ರಮದ ಜೈನಮುನಿಯ ಹತ್ಯೆ ಮಾಡಿದ ಘಟನೆ ಅತ್ಯಂತ ದುರದೃಷ್ಟಕರ, ಖಂಡನೀಯ, ಕೂಡಲೇ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಮತ್ತೆ ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಒಕ್ಕೂಟದ ಉಪಾಧ್ಯಕ್ಷ ಡಾ.ಶ್ರೀನಾಥ್ ಅವರು ಮಾತನಾಡಿ, ವಿಶ್ವದ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಭಾರತ ಅತಿದೊಡ್ಡ ರಾಷ್ಟ್ರ ವಾಗಿದೆ. ಭಾರತ ಕೃಷಿಗೆ ಪ್ರಧಾನವಾದಂತ ರಾಷ್ಟವಾಗಿದೆ. ಇಂತಹ ದೇಶದಲ್ಲಿ ಹಿಂದೂ ಧರ್ಮ ಮಹೋನ್ನತವಾಗಿದೆ. ನಮ್ಮ ದೇಶ ಎಲ್ಲ ಧರ್ಮದವರನ್ನು ಒಳಗೊಂಡಿದ್ದು, ಅನೇಕ ಸಾದು ಸಂತರ ನೆಲೆ ಬೀಡಾಗಿದೆ. ಅಹಿಂಸಾ, ಅನುಕಂಪದ ದಾರಿಯಲ್ಲಿ ನಡೆದು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಇಂತಹದಲ್ಲಿ ಜೈನ ಧರ್ಮದ ಜೈನ ಮುನಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ, ಕೂಡಲೇ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ರವಾನಿಸಲಾಯಿತು. ಈ ಸಂದರ್ಭದಲ್ಲಿ ಪಂಡಿತರಾದ ಪ್ರವೀಣ್ ಆಚಾರ್, ನವೀನ್ ಆಚಾರ್, ಒಕ್ಕೂಟದ ಪದಾಧಿಕಾರಿಗಳಾದ ಬಿಕೆಬಿಎನ್ ಮೂರ್ತಿ, ಸಿಮೆಂಟ್ ಗಿರಿ, ಹರಿಶ್, ರಘುನಂದನ್, ವೆಂಕಣ್ಣ, ಹನ್ಮಂತಾಚಾರ್, ಪ್ರದೀಪ್, ಹರಿ ಕುಮಾರ್, ಭೀಮರಾವ್, ನ್ಯಾಯವಾದಿ ವಿಜಯಲಕ್ಷ್ಮಿ ಇತರರಿದ್ದರು.